Site icon Vistara News

Fifa World Cup | ತಂಡದಿಂದ ಹೊರಕ್ಕಿಟ್ಟಿದ್ದಕ್ಕೆ ಮುನಿಸು; ಗೆಲುವಿನ ಸಂಭ್ರಮಾಚರಣೆ ಮಾಡದ ರೊನಾಲ್ಡೊ

Cristiano Ronaldo

ದೋಹಾ: ಕತಾರ್​ನಲ್ಲಿ ನಡೆದ ಬುಧವಾರದ ಫಿಫಾ ವಿಶ್ವ ಕಪ್​(Fifa World Cup) ನ ಪಂದ್ಯದಲ್ಲಿ ಸ್ವಿಜರ್​ಲ್ಯಾಂಡ್​ ವಿರುದ್ಧ ಪೋರ್ಚುಗಲ್​ ತಂಡ 6-1 ಗೋಲ್​ಗಳ ಅಂತರದಿಂದ ಗೆದ್ದು ಕ್ವಾರ್ಟರ್​ ಫೈನಲ್​ ತಲುಪಿದೆ. ಆದರೆ ತಂಡದ ಸ್ಟಾರ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂಡದ ಈ ಗೆಲುವಿನ ಸಂಭ್ರಮಾಚರಣೆಯನ್ನು ನಿರಾಕರಿಸಿ ಮೈದಾನದಿಂದ ಹೊರ ನಡೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬುಧವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ಇದರ ಸಿಟ್ಟಿನಲ್ಲಿದ್ದ ಅವರು ತನ್ನ ತಂಡ 2006ರ ಬಳಿಕ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದರೂ ಆಟಗಾರರೊಂದಿಗೆ ಸಂಭ್ರಮಿಸದೆ ಮೈದಾನದಿಂದ ಹೊರ ನಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಒಂದೆಡೆ ಎಲ್ಲ ಆಟಗಾರರು ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದರೆ ರೊನಾಲ್ಡೊ ಮಾತ್ರ ಮೈದಾನದಿಂದ ಹೊರ ಬರುತ್ತಿರುವ ವಿಡಿಯೊ ಇದೀಗ ವೈರಲ್​ ಆಗಿದೆ.

ಕೋಚ್​ ನಡುವೆ ವಾಗ್ವಾದ
ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದ ಕೊನೇ ಕ್ಷಣದಲ್ಲಿ ರೊನಾಲ್ಡೊ ಅವರನ್ನು ಹೊರಗುಳಿಸಿ ಬದಲಿ ಆಟಗಾರನನ್ನು ಕಣಕ್ಕಿಳಿಸಲಾಗಿತ್ತು. ಈ ವಿಚಾರದಲ್ಲಿ ತಂಡದ ಕೋಚ್​ ಫೆರ್ನಾಂಡೊ ಸ್ಯಾಂಟೋಸ್ ಜತೆ ರೊನಾಲ್ಡೊ ವಾಗ್ವಾದ ನಡೆಸಿದ್ದರು. ಇದೇ ಕಾರಣಕ್ಕೆ ಸ್ವಿಜರ್​ಲ್ಯಾಂಡ್​ ಪಂದ್ಯದಿಂದ ರೊನಾಲ್ಡೊ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೊನಾಲ್ಡೊ ಕಿರಿಕ್​ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಆಡಳಿತ ಮಂಡಳಿಯೊಂದಿಗೆ ರೊನಾಲ್ಡೊ ವಾಗ್ವಾದ ನಡೆಸಿ ಕ್ಲಬ್​ಗೆ ಗುಡ್​ಬೈ ಹೇಳಿದ್ದರು.

ರೊನಾಲ್ಡೊ ಬದಲಿಗೆ ಸ್ವಿಜರ್​ಲ್ಯಾಂಡ್​ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದ 21 ವರ್ಷದ ಗೊನ್ಕಾಲೊ ರಾಮೋಸ್​ ಹ್ಯಾಟ್ರಿಕ್​ ಗೋಲ್​ ಗಳಿಸಿ ಪೋರ್ಚುಗಲ್ ತಂಡದ​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದನ್ನೂ ಓದಿ | Fifa World Cup | ರಾಮೋಸ್​ ಹ್ಯಾಟ್ರಿಕ್ ಗೋಲ್​ ಸಾಹಸ; ಕ್ವಾರ್ಟರ್​ ಫೈನಲ್ ತಲುಪಿದ ಪೋರ್ಚುಗಲ್

Exit mobile version