Site icon Vistara News

Fifa World Cup | ಫಿಫಾ ವಿಶ್ವಕಪ್​ ಫೈನಲ್​; ಮೆಸ್ಸಿಗೆ ಸಿಗಲಿದೆಯಾ ಗೆಲುವಿನ ವಿದಾಯ?

fifa world cup final

ದೋಹಾ: ಮೆಸ್ಸಿ ಮತ್ತು ಅರ್ಜೆಂಟೀನಾದ ಸಂಭ್ರಮ ಮುಗಿಲು ಮುಟ್ಟಲು ಇನ್ನೊಂದೇ ಗೆಲುವಿನ ಮೆಟ್ಟಿಲು ಹತ್ತಿದರೆ ಸಾಕು. ರವಿವಾರ ರಾತ್ರಿ 80 ಸಾವಿರದಷ್ಟು ಅಗಾಧ ಪ್ರೇಕ್ಷಕರ ಸಮ್ಮುಖದಲ್ಲಿ, “ಲುಸೈಲ್‌ ಸ್ಟೇಡಿಯಂ’ನಲ್ಲಿ ನಡೆಯಲಿರುವ ವಿಶ್ವ ಕಪ್‌ ಫುಟ್ಬಾಲ್(Fifa World Cup)​ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವನ್ನು ಎದುರಿಸಲಿದೆ. ಇಲ್ಲಿ ಅರ್ಜೆಂಟೀನಾ ಗೆದ್ದರೆ ಈ ಮೇಲಿನ ಮಾತು ಸತ್ಯವಾಗಲಿದೆ.

ಫೈನಲ್​ ಪಂದ್ಯಕ್ಕೂ ಮುನ್ನವೇ ಫುಟ್ಬಾಲ್​ ಜಗತ್ತು ಮಾತ್ರ ಮೆಸ್ಸಿ ವರ್ಸಸ್‌ ಫ್ರಾನ್ಸ್‌ ಎಂದೇ ಈ ಮಹಾಸಮರವನ್ನು ಬಣ್ಣಿಸುತ್ತಿದೆ. ಕಾರಣ ಲಿಯೋನೆಲ್​ ಮೆಸ್ಸಿ ಈ ಸಲ ಖಂಡಿತ ಟ್ರೋಫಿ ಎತ್ತಿ ಸ್ಮರಣೀಯ ವಿದಾಯ ಹೇಳಲಿದ್ದಾರೆ ಎಂಬ ದೃಢ ನಂಬಿಕೆಯಿಂದ. ಆದರೆ ಈ ಸವಾಲು ಅಷ್ಟು ಸುಲಭವಲ್ಲ. ಕಾರಣ ಎದುರಾಳಿ ಫ್ರಾನ್ಸ್​ ಕೂಡ ಬಲಿಷ್ಠವಾಗಿದೆ. ಜತೆಗೆ ಹಾಲಿ ಚಾಂಪಿಯನ್​ ಕೂಡ ಈ ನಿಟ್ಟಿನಲ್ಲಿ ಮೆಸ್ಸಿಯ ವಿಶ್ವ ಕಪ್​ ಕನಸು ನನಸಾಗಬೇಕಾದರೆ ತಂಡದ ಎಲ್ಲ ಆಟಗಾರರು ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ.

ಮೆಸ್ಸಿ ಆಟ ನಿರ್ಣಾಯಕ

6ನೇ ಸಲ ಫಿಫಾ ವಿಶ್ವಕಪ್‌ ಫೈನಲ್‌ಗೆ ಲಗ್ಗೆ ಇರಿಸಿದ ಅರ್ಜೆಂಟೀನಾ ಪರ ಈ ಬಾರಿ ನಾಯಕ ಲಿಯೋನೆಲ್​ ಮೆಸ್ಸಿ ಕೂಟದುದ್ದಕೂ ಅಮೋಘ ಪ್ರದರ್ಶನ ತೋರಿದ್ದಾರೆ. ಸರ್ವಾಧಿಕ 25 ಪಂದ್ಯಗಳ ವಿಶ್ವ ಕಪ್‌ ದಾಖಲೆಯನ್ನು ಸರಿದೂಗಿಸಿದ 35 ವರ್ಷದ ಮೆಸ್ಸಿ, ಜೀವಮಾನದಲ್ಲೇ ಅತ್ಯುತ್ತಮ ಆಟವಾಡಿದರು ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಕೂಟದುದಕ್ಕೂ ತಂಡದ ಗೆಲುವಿಗಾಗಿ ಅವರು ಸರ್ವಸ್ವವನ್ನೂ ಧಾರೆ ಎರೆದಂತಿತ್ತು. 2014ರಲ್ಲೂ ಮೆಸ್ಸಿ ಪಡೆ ಫೈನಲ್‌ ಪ್ರವೇಶಿಸಿತ್ತು. ಆದರೆ ಅಲ್ಲಿ ಜರ್ಮನಿಗೆ ಶರಣಾಗಿ ಪ್ರಶಸ್ತಿ ವಂಚಿತವಾಗಿತ್ತು. ಇದೀಗ ಫಿಪಾ ವಿಶ್ವ ಕಪ್​ ಫೈನಲ್​ನಲ್ಲಿ ಟ್ರೋಫಿ ಗೆಲ್ಲುವ ಕೊನೆಯ ಅವಕಾಶವನ್ನು ಮೆಸ್ಸಿ ಯಶಸ್ವಿಗೊಳಿಸಬಲ್ಲರೇ ಎಂಬುದು ಅಭಿಮಾನಿಗಳ ದೊಡ್ಡ ನಿರೀಕ್ಷೆ.

ಮೆಸ್ಸಿಗೆ ಗಾಯದ ಚಿಂತೆ

ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಮೆಸ್ಸಿ ಕಳೆದ ಸೆಮಿಫೈನಲ್​ ಪಂದ್ಯದ ಬಳಿಕ ನಡೆಸಿದ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ. ಒಂದೊಮ್ಮೆ ಫೈನಲ್​ ಪಂದ್ಯದಲ್ಲಿ ಅವರಿಗೆ ಮತ್ತೆ ನೋವಿನ ಸಮಸ್ಯೆ ಕಾಡಿದರೆ. ತಂಡಕ್ಕೆ ಹಿನ್ನಡೆಯಾಗಲಿದೆ. ಜತೆಗೆ ಪ್ರಮುಖ ಆಟಗಾರ ಈ ಪಂದ್ಯದಿಂದ ಹೊರಗುಳಿದರೆ ತಂಡದ ಆಟಗಾರರ ಆತ್ಮವಿಶ್ವಾಸ ಕುಗ್ಗುವುದರಲ್ಲಿ ಅನುಮಾನವಿಲ್ಲ ಆಗ ಎದುರಾಳಿ ತಂಡ ಸಂಪೂರ್ಣವಾಗಿ ಲಾಭವೆತ್ತಬಹುದು.

ಕಿಲಿಯನ್‌ ಎಂಬಾಪೆಯ ಕಾಲ್ಚಳಕ

ಫ್ರಾನ್ಸ್‌ ತಂಡ ಹಾಲಿ ಚಾಂಪಿಯನ್​ ಖ್ಯಾತಿಗೆ ತಕ್ಕಂತೆ ಈ ಬಾರಿಯೂ ಕೂಟದಲ್ಲಿ ಶ್ರೇಷ್ಠ ಪ್ರದರ್ಶನವನ್ನೇ ತೋರಿದೆ. ಅದರಂತೆ ಸತತ ಎರಡನೇ ಬಾರಿ ಕಪ್​ ಎತ್ತುವ ನೆಚ್ಚಿನ ತಂಡವೆಂದು ಹೇಳಲಾಗಿದೆ. ಈ ತಂಡ ಸ್ಟಾರ್​ ಆಟಗಾರ ಕಿಲಿಯನ್‌ ಎಂಬಾಪೆ ಇದೀಗ ಫೈನಲ್​ ಪಂದ್ಯದಲ್ಲಿಯೂ ಕಾಲ್ಚಳಕ ತೋರಲು ಮುಂದಾಗಿದ್ದಾರೆ. ಒಂದೊಮ್ಮೆ ಫ್ರಾನ್ಸ್​ ಫೈನಲ್​ನಲ್ಲಿ ಗೆದ್ದರೆ ಎಂಬಾಪೆ ಅವರು ಬ್ರೆಜಿಲ್‌ನ ದಿಗ್ಗಜ ಆಟಗಾರ ಪೀಲೆ ಅವರ ದಾಖಲೆ ಸರಿಗಟ್ಟಲಿದ್ದಾರೆ. ಪೀಲೆ ತಾವಾಡಿದ ಮೊದಲ ಎರಡು ವಿಶ್ವ ಕಪ್‌ ಟೂರ್ನಿಗಳಲ್ಲಿ ಟ್ರೋಫಿ ಜಯಿಸಿದ್ದರು. 2018 ರಲ್ಲಿ ಫ್ರಾನ್ಸ್‌ ಗೆದ್ದಾಗ ಎಂಬಾಪೆ ತಂಡದಲ್ಲಿದ್ದರು. ಇದೀಗ ತಮ್ಮ 23ನೇ ವಯಸ್ಸಿನಲ್ಲಿ 2ನೇ ಪ್ರಶಸ್ತಿಯ ಎತ್ತುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್​ ಚಾಂಪಿಯನ್​ ತಂಡಕ್ಕೆ ಸಿಗಲಿರುವ ಬಹುಮಾನ ಮೊತ್ತವೆಷ್ಟು?

Exit mobile version