ದೋಹಾ: ಹಲವು ಆರೋಪ ಮತ್ತು ವಿರೋಧಗಳ ನಡುವೆ ಕತಾರ್ ಆತಿಥ್ಯದಲ್ಲಿ ತೆರೆ ಕಂಡ ಫುಟ್ಬಾಲ್ ವಿಶ್ವ ಕಪ್ ಬಳಿಕ ಇದೀಗ ಮುಂದಿನ ವಿಶ್ವ ಕಪ್ ಟೂರ್ನಿಯನ್ನು ಇನ್ನಷ್ಟು ದೊಡ್ಡದಾಗಿ ಆಯೋಜಿಸಲು ಫಿಫಾ ತೀರ್ಮಾನಿಸಿದೆ. 2026ರ ರಲ್ಲಿ ನಡೆಯುವ ಈ ಕಾಲ್ಚೆಂಡಿನ ಕಾಳಗಕ್ಕೆ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಆತಿಥ್ಯ ವಹಿಸಲಿದೆ. ಫಿಫಾ ಇತಿಹಾಸದಲ್ಲೇ ಮೂರು ದೇಶಗಳು ಜಂಟಿ ಆತಿಥ್ಯ ವಹಿಸಲಿರುವುದು ಇದೇ ಮೊದಲು.
2026ರ ಫುಟ್ಬಾಲ್ ವಿಶ್ವ ಕಪ್ ಮೂರು ದೇಶಗಳ ಆತಿಥ್ಯದಲ್ಲಿ ನಡೆಯುವ ಕಾರಣ ಫಿಫಾ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಅದರಂತೆ ಈ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು 32 ರಿಂದ 48ಕ್ಕೆ ಹೆಚ್ಚಿಸಲು ಫಿಫಾ ಚಿಂತನೆ ನಡೆಸಿದೆ. 48 ತಂಡಗಳನ್ನು ಒಳಗೊಂಡಿರುವ ಟೂರ್ನಿಯಲ್ಲಿ ಪಂದ್ಯಗಳನ್ನು ಯಾವ ಮಾದರಿಯಲ್ಲಿ ನಡೆಸಬೇಕು ಎಂಬುದನ್ನು ಫಿಫಾ ಇನ್ನಷ್ಟೇ ಅಂತಿಮಗೊಳಿಸಬೇಕಿದೆ.
ನೂರಕ್ಕೂ ಅಧಿಕ ಪಂದ್ಯಗಳು!
ಸದ್ಯದ ಮಾಹಿತಿ ಪ್ರಕಾರ ಲೀಗ್ ಹಂತದಲ್ಲಿ ತಲಾ 12 ತಂಡಗಳ ನಾಲ್ಕು ಗುಂಪುಗಳನ್ನು ಮಾಡಿ ಆಡಿಸುವ ಸಾಧ್ಯತೆ ಇದೆ. ಅದರಂತೆ ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮತ್ತು ಬಳಿಕದ ಅತ್ಯುತ್ತಮ ಸಾಧನೆ ತೋರಿದ ಇತರ 8 ತಂಡಗಳು ನಾಕೌಟ್ ಪ್ರವೇಶಿಸಲಿವೆ. ಹಾಗಾದಲ್ಲಿ ಟೂರ್ನಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ | Fifa World Cup | ಕಾಂತಾರ ಕ್ಲೈಮ್ಯಾಕ್ಸ್ ರೀತಿ ಮೆಸ್ಸಿಯನ್ನು ಕೂಗಿ ಎಬ್ಬಿಸಿದ ಮರಡೋನಾ!