ಕೊಚ್ಚಿ: ಇನ್ನೇನು ಕೆಲವೇ ಕ್ಷಣದಲ್ಲಿ ಕತಾರ್ನಲ್ಲಿ ಫಿಫಾ ವಿಶ್ವ ಕಪ್(Fifa World Cup) ಕಹಳೆ ಮೊಳಗಲಿದೆ. ವಿಶ್ವದೆಲ್ಲೆಡೆ ಈ ಫುಟ್ಬಾಲ್ ಜ್ವರ ಕಾವೇರಿದೆ. ಆದರೆ ದೇವರ ನಾಡು ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ (Mundakkamugal) ಗ್ರಾಮಸ್ಥರು ಪುಟ್ಬಾಲ್ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ಜತೆಯಾಗಿ ಪಂದ್ಯ ನೋಡುವ ಸಲುವಾಗಿ 23 ಲಕ್ಷ ರೂಪಾಯಿ ವೆಚ್ಚ ಮಾಡಿ ಮನೆ ಇರುವ ಒಂದು ಆಸ್ತಿಯನ್ನೇ ಖರೀದಿಸಿದ್ದಾರೆ.
ಸುಮಾರು 17 ಜನ ಫುಟ್ಬಾಲ್ ಅಭಿಮಾನಿಗಳು ಒಟ್ಟು ಸೇರಿ ಈ ಆಸ್ತಿಯನ್ನು ಖರೀದಿಸಿದ್ದು ಈ ಮನೆಯ ಸುತ್ತ ಮುತ್ತ ಬ್ರೆಜಿಲ್, ಅರ್ಜೆಂಟೀನಾ ಹಾಗೂ ಪೋರ್ಚುಗಲ್ ದೇಶಗಳ ಚಿತ್ರಗಳನ್ನು ರಚಿಸಿದ್ದಾರೆ. ಜತೆಗೆ ತಮ್ಮ ನೆಚ್ಚಿನ ಆಟಗಾರರಾದ ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ನೇಮರ್ ಸಹಿತ ವಿವಿಧ ಫುಟ್ಬಾಲ್ ತಾರೆಯರ ಕಟೌಟ್‌ಗಳನ್ನು ಕೂಡ ನಿರ್ಮಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಸ್ತಿ ಖರೀದಿದಾರರಲ್ಲಿ ಒಬ್ಬರಾದ ಶರೀಫ್, ನಾವು ಫಿಫಾ ವಿಶ್ವ ಕಪ್‌ಗಾಗಿ ಏನಾದರೂ ಹೊಸತನ್ನು ಮಾಡಲು ಯೋಜನೆ ರೂಪಿಸಿದ್ದೆವು. ಇದೇ ವೇಳೆ ಮನೆಯನ್ನೊಳಗೊಂಡ ಆಸ್ತಿಯೊಂದು ಮಾರಾಟಕ್ಕಿರುವ ವಿಚಾರ ನಮಗೆ ತಿಳಿಯಿತು. ಆಗ ನಮ್ಮ ಗುಂಪಿನಲ್ಲಿ ಕೆಲವರು ಈ ಮನೆಯನ್ನು ನಾವು ಖರೀದಿ ಮಾಡಿದರೆ ಎಲ್ಲರು ಒಂದೇ ಕಡೆ ಪಂದ್ಯವನ್ನು ನೋಡಬಹುದು ಎಂಬ ಸಲಹೆ ನೀಡಿದರು. ಅದರಂತೆ ನಾವು 17 ಜನ ಒಟ್ಟಾಗಿ ಹಣವನ್ನು ಹೊಂದಿಸಿ ಈ ಆಸ್ತಿಯನ್ನು ಖರೀದಿಸಿದೆವು ಎಂದರು.
ಯಾವುದೇ ದೇಶದ ಫುಟ್ಬಾಲ್ ಅಭಿಮಾನಿಯೂ ಇಲ್ಲಿ ಬಂದು ದೊಡ್ಡ ಪರದೆಯ ಮೂಲಕ ಪಂದ್ಯ ವೀಕ್ಷಿಸಬಹುದಾಗಿದೆ. ಆದರೆ ಅಭಿಮಾನದ ಬರದಲ್ಲಿ ಅಹಿತಕರ ಘಟನೆಗೆ ದಾರಿ ಮಾಡಿಕೊಡಬಾರದು ಎಂಬ ಮನವಿಯನ್ನು ಶರೀಫ್ ಮಾಡಿದ್ದಾರೆ. ಇದಕ್ಕೂ ಮುನ್ನ ಕಲ್ಲಿಕೋಟೆಯ ನದಿ ಮಧ್ಯದಲ್ಲಿ ಫುಟ್ಬಾಲ್ ಲೆಜೆಂಡ್ಗಳಾದ ಲಿಯೋನಲ್ ಮೆಸ್ಸಿ ಮತ್ತು ನೇಮರ್ ಅವರ ಕಟೌಟ್ ನಿರ್ಮಿಸಿದ ವಿಡಿಯೊ ಎಲ್ಲಡೆ ವೈರಲ್ ಆಗಿತ್ತು.
ಇದನ್ನೂ ಓದಿ | FIFA World Cup | ವಿಶ್ವ ಕಪ್ ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ ಉಪರಾಷ್ಟ್ರಪತಿ ಜಗದೀಪ್ ಧನಕರ್