Site icon Vistara News

Fifa World Cup | ಇಂದಿನಿಂದ ಫಿಫಾ ಕಾಲ್ಚೆಂಡಿನ ಕಾಳಗದಲ್ಲಿ ಕ್ವಾರ್ಟರ್​ ಫೈನಲ್​ ಕಾದಾಟ

Fifa World Cup

ದೋಹಾ: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್‌(Fifa World Cup) ಫುಟ್ಬಾಲ್​ ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ ಹೋರಾಟ ಆರಂಭಗೊಳ್ಳಲಿದ್ದು ವಿಶ್ವದ ಬಲಿಷ್ಠ ಎಂಟು ತಂಡಗಳು ಹೋರಾಡಲಿವೆ.

ದೋಹಾದಲ್ಲಿ ಶುಕ್ರವಾರ ನಡೆಯಲಿರುವ ಮೊದಲೆರಡು ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಬಲಿಷ್ಠ ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್​ ತಂಡವು ಕ್ರೊವೇಷ್ಯಾ ಸವಾಲು ಎದುರಿಸಿದರೆ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವು ಅರ್ಜೆಂಟೀನಾ ವಿರುದ್ಧ ಸೆಣಸಾಟ ನಡೆಸಲಿದೆ. ಉಳಿದಂತೆ ಶನಿವಾರದ ಎರಡು ಪಂದ್ಯಗಳಲ್ಲಿ ಮೊರೊಕ್ಕೊ ತಂಡವು ಪೋರ್ಚುಗಲ್‌ ಹಾಗೂ ಹಾಲಿ ಚಾಂಪಿಯನ್‌ ಫ್ರಾನ್ಸ್‌ ತಂಡವು ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ.

ಬ್ರೆಜಿಲ್​ಗೆ ನೇಮರ್​ ಬಲ

ಐದು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅದು ದಕ್ಷಿಣ ಕೊರಿಯವನ್ನು 4-1 ಗೋಲುಗಳಿಂದ ಸೋಲಿಸಿರುವುದು ತಂಡದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಕೇವಲ 36 ನಿಮಿಷಗಳ ಅಂತರದಲ್ಲಿ ನಾಲ್ಕು ಭರ್ಜರಿ ಗೋಲು ದಾಖಲಿಸಿದ್ದ ಬ್ರೆಜಿಲ್‌ ಅದ್ಭುತ ರೀತಿಯಲ್ಲಿಯೇ ಕ್ವಾರ್ಟರ್‌ ಫೈನಲಿಗೆ ನೆಗೆದಿತ್ತು. ಜತೆಗೆ ಗಾಯದಿಂದ ಕೆಲ ಪಂದ್ಯಗಳಲ್ಲಿ ಹೊರಗುಳಿದಿದ್ದ ಪ್ರಮುಖ ಆಟಗಾರ ನೇಮರ್​ ಕೂಡ ತಂಡಕ್ಕೆ ಆಗಮಿಸಿದ್ದು ತಂಡ ಮತ್ತಷ್ಟು ಬಲಿಷ್ಠಗೊಂಡಿದೆ.

ಸಮರ್ಥ ತಂಡ

ಇತರ ತಂಡಗಳಿಗೆ ಹೋಲಿಸಿದರೆ ಬ್ರೆಜಿಲ್​ ತಂಡ ಒಬ್ಬ ಆಟಗಾರನನ್ನು ನೆಚ್ಚಿಕೊಂಡಿಲ್ಲ. ಜತೆಗೆ ಉತ್ತಮ ಫಾರ್ವರ್ಡ್​​ ಆಟಗಾರರ ಪಡೆಯೇ ಈ ತಂಡದಲ್ಲಿರುವುದರಿಂದ ಸಮರ್ಥವಾಗಿದೆ. ತಂಡದ ನಂಬಿಗಸ್ಥ ಆಟಗಾರ ನೇಮರ್‌ ಸಹಿತ ಯುವ ಆಟಗಾರರಾದ ವಿನಿಸಿಯಸ್‌ ಜೂನಿಯರ್‌, ಲುಕಾಸ್‌ ಪಕ್ವೆಟ ಮತ್ತು ರಿಚಾರ್ಲಿಸನ್‌ ಅವರು ತಂಡದಲ್ಲಿದ್ದು ಶ್ರೇಷ್ಠ ನಿರ್ವಹಣೆ ನೀಡುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಬ್ರೆಝಿಲ್‌ ಪರಿಪೂರ್ಣ ತಂಡವಾಗಿ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೊವೇಷ್ಯಾ ವಿರುದ್ಧ ಹೋರಾಡುವುದು ಖಚಿತವಾಗಿದೆ.

ಕ್ರೊವೇಷ್ಯಾ ಕೂಡ ಬಲಿಷ್ಠ

ಕ್ರೊವೇಷ್ಯಾ ತಂಡವನ್ನು ಕಡೆಗಣಿಸುವಂತಿಲ್ಲ ಕಳೆದ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೋತಿಲ್ಲ. ಜತೆಗೆ 2020ರ ಯುರೋ ಕಪ್‌ನಿಂದ ಈ ತನಕ 20 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಸೋಲುಂಡಿದೆ. ಈ ನಿಟ್ಟಿನಲ್ಲಿ ಬ್ರೆಜಿಲ್​ಗೆ ತೀವ್ರ ಪೈಪೋಟಿ ನೀಡುವಲ್ಲಿ ನೀಡುವ ನಿರೀಕ್ಷೆ ಇದೆ.

ಇದನ್ನೂ ಓದಿ | Fifa World Cup| ಆಪರೇಷನ್ ಥಿಯೇಟರ್‌ನಲ್ಲೇ ಫಿಫಾ ವಿಶ್ವ ಕಪ್​ ಪಂದ್ಯ ವೀಕ್ಷಿಸಿದ ರೋಗಿ!

Exit mobile version