ದೋಹಾ: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವ ಕಪ್(Fifa World Cup)ಗೆ ಭಾನುವಾರ ತೆರೆ ಬೀಳಲಿದೆ. ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ಮತ್ತು ಅಂತಿಮ ವಿಶ್ವ ಕಪ್ ಆಡುತ್ತಿರುವ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಕಾದಾಟ ನಡೆಸಲಿದೆ. ಈ ವಿಶ್ವ ಕಪ್ ಗೆಲ್ಲುವ ತಂಡಕ್ಕೆ ಭಾರಿ ಮೊತ್ತದ ಬಹುಮಾನವೇ ಸಿಗಲಿದೆ. ಅದು ಎಷ್ಟು ಎಂಬುದರ ವಿವರ ಈ ಕೇಳಗಿನಂತಿದೆ.
ಫೈನಲ್ನಲ್ಲಿ ಫ್ರಾನ್ಸ್ ಅಥವಾ ಅರ್ಜೆಂಟೀನಾ ಮಧ್ಯೆ ಯಾರೇ ಗೆದ್ದರೂ ಈ ತಂಡಕ್ಕೆ 42 ಮಿಲಿಯನ್ ಡಾಲರ್ ಅಂದರೆ ಅಂದಾಜು 344 ಕೋಟಿ ರೂ. ಹಣ ಬಹುಮಾನದ ರೂಪದಲ್ಲಿ ಸಿಗಲಿದೆ. ದ್ವಿತೀಯ ಸ್ಥಾನ ಅಲಂಕರಿಸುವ ತಂಡಕ್ಕೆ 30 ಮಿಲಿಯನ್ ಅಂದರೆ ಸುಮಾರು 245 ಕೋಟಿ ರೂ. ಬಹುಮಾನ ಸಿಗಲಿದೆ.
ಈಗಾಗಲೇ ಮೂರನೇ ಸ್ಥಾನದ ಪಂದ್ಯ ಶನಿವಾರ ಅಂತ್ಯಕಂಡಿದ್ದು ಮೊರೊಕ್ಕೊ ವಿರುದ್ಧ ಗೆದ್ದ ಕ್ರೊವೇಶಿಯಾ ತಂಡ 27 ಮಿಲಿಯನ್ ಡಾಲರ್ (ಸರಿಸುಮಾರು 220 ಕೋಟಿ ರೂ.) ಸಂಭಾವನೆ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ಮೊರಾಕೊ 25 ಮಿಲಿಯನ್ ಡಾಲರ್ (ಸುಮಾರು 204 ಕೋಟಿ ರೂ.) ಹಣವನ್ನು ಬಹುಮಾನವನ್ನಾಗಿ ಪಡೆಯಲಿದೆ.
ಐದರಿಂದ ಎಂಟನೇ ಸ್ಥಾನ ಪಡೆಯುವ ತಂಡಗಳು 17 ಮಿಲಿಯನ್ ಡಾಲರ್ (ಸುಮಾರು 138 ಕೋಟಿ ರೂ.), ಎಂಟರಿಂದ 16 ನೇ ಶ್ರೇಯಾಂಕದ ತಂಡಗಳಿಗೆ 13 ಮಿಲಿಯನ್ ಡಾಲರ್ (106 ಕೋಟಿ ರೂ.) ಮೊತ್ತ ಸಿಗಲಿದೆ.
ಫಿಫಾ ವಿಶ್ವಕಪ್-2022 ರಲ್ಲಿ ತಂಡಗಳಿಗೆ ಬಹುಮಾನವಾಗಿ ನೀಡಿದ ಒಟ್ಟು ಮೊತ್ತ 440 ಮಿಲಿಯನ್ ಡಾಲರ್ ಆಗಲಿದೆ. ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸುಮಾರು 3600 ಕೋಟಿ ರೂ. ಆಗಲಿದೆ.
ಇದನ್ನೂ ಓದಿ | FIFA World Cup | ಕ್ರೊವೇಷಿಯಾ ತಂಡಕ್ಕೆ ಮೂರನೇ ಸ್ಥಾನ, ಮೊರಾಕ್ಕೊಗೆ 2-1 ಗೋಲ್ಗಳ ಸೋಲು