ದೋಹಾ: ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಬೇಕೆಂಬ ಕನಸಿನೊಂದಿಗೆ ಕತಾರ್‌ಗೆ ಬಂದಿರುವ ಹಾಲಿ ಫಿಫಾ ವಿಶ್ವ ಕಪ್ ಚಾಂಪಿಯನ್ ಫ್ರಾನ್ಸ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಕರೀಂ ಬೆಂಜೆಮಾ ಗಾಯಕ್ಕೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಈ ಬಾರಿಯ ‘ಬ್ಯಾಲನ್ ಡಿ ಓರ್’ ಪ್ರಶಸ್ತಿ ವಿಜೇತ ತಂಡದ ಪ್ರಧಾನ ಫಾರ್ವರ್ಡ್ ಆಟಗಾರ ಕರೀಂ ಬೆಂಜೆಮಾ ಅವರು ಶನಿವಾರ ಅಭ್ಯಾಸದ ವೇಳೆ ಎಡತೊಡೆಯ ಸ್ನಾಯುವಿನ ಗಾಯಕ್ಕೆ ತುತ್ತಾದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಫ್ರಾನ್ಸ್ ಫುಟ್ಬಾಲ್ ಫೆಡರೇಶನ್ ಖಚಿತಪಡಿಸಿದೆ.
“ಸಹ ಆಟಗಾರರ ಜತೆ ಪೂರ್ಣ ಪ್ರಮಾಣದ ಅಭ್ಯಾಸದಲ್ಲಿ ತೊಡಗಿದ್ದಾಗ ಬೆಂಜೆಮಾ ಅವರಿಗೆ ಗಾಯವಾಗಿದೆ. ಅವರ ಎಡತೊಡೆಯ ಸ್ನಾಯು ಸೀಳಿಹೋಗಿರುವುದು ಎಂಆರ್‌ಐ ಸ್ಕ್ಯಾನಿಂಗ್‌ನಿಂದ ಖಚಿತವಾಗಿದೆ. ಅವರ ಅನುಪಸ್ಥಿತಿ ತಂಡಕ್ಕೆ ಬೇಸರ ತಂದಿದೆ. ಆದಷ್ಟು ಬೇಗ ಅವರು ಗುಣಮುಖರಾಗಿ ಮತ್ತೆ ತಂಡ ಸೇರಲಿ ಎನ್ನುವುದು ನಮ್ಮ ಹಾರೈಕೆ” ಎಂದು ಫ್ರಾನ್ಸ್ ಫುಟ್ಬಾಲ್ ಫೆಡರೇಶನ್ ಪ್ರಕಟಣೆ ತಿಳಿಸಿದೆ. ಈಗಾಗಲೇ ತಂಡದ ಪ್ರಮುಖ ಆಟಗಾರರಾದ ಪಾಲ್ ಪೊಗ್ಬಾ ಮತ್ತು ಎಂಗೊಲೊ ಕಾಂಟೆ ಬಳಿಕ ಇದೀಗ ಬೆಂಜೆಮಾ ಕೂಡಾ ಗಾಯಗೊಂಡಿರುವುದು ಹಾಲಿ ಚಾಂಪಿಯನ್ನರಿಗೆ ಭಾರಿ ಹಿನ್ನಡೆ ಉಂಟುಮಾಡಿದೆ.
2014ರ ವಿಶ್ವ ಕಪ್‌ನಲ್ಲಿ ಆಡಿದ್ದ ಕರೀಂ ಬೆಂಜೆಮಾ, ಫ್ರಾನ್ಸ್ ಪರ ಅತಿಹೆಚ್ಚು ಗೋಲು ಗಳಿಸಿದ ಸಾಧನೆ ಮೆರೆದಿದ್ದರು. ಬಳಿಕ ವಿವಾದದ ಸಮಸ್ಯೆಗೆ ಸಿಲುಕಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರಿಂದ 2018ರ ವಿಶ್ವ ಕಪ್ ಆಡಿರಲಿಲ್ಲ. ಇದೀಗ 2022ರ ಕತಾರ್ ವಿಶ್ವ ಕಪ್‌ನಲ್ಲಿ ಆಡುವ ಅವಕಾಶ ಸಿಕ್ಕರೂ ಅಂತಿಮ ಕ್ಷಣದಲ್ಲಿ ಗಾಯದ ಸಮಸ್ಯೆಗೆ ಸಿಲುಕಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
‘ಡಿ’ ಗುಂಪಿನಲ್ಲಿರುವ ಫ್ರಾನ್ಸ್ ತಂಡ ಮಂಗಳವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮೂಲಕ ತನ್ನ ವಿಶ್ವ ಕಪ್ ಅಭಿಯಾನವನ್ನು ಆರಂಭಿಸಲಿದೆ. ಆ ಬಳಿಕ ಡೆನ್ಮಾರ್ಕ್ ಹಾಗೂ ಟ್ಯುನೀಷಿಯಾ ವಿರುದ್ಧ ಆಡಲಿದೆ.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಪಂದ್ಯ ನೋಡಲು ಮನೆಯನ್ನೇ ಖರೀದಿ ಮಾಡಿದ ಕೇರಳದ ಸ್ನೇಹಿತರು!