ದೋಹಾ : ಫಿಫಾ ವಿಶ್ವ ಕಪ್‌ನಲ್ಲಿ (FIFA World Cup) ಶುಕ್ರವಾರ ಸಂಜೆ ವೇಳೆ ನಡೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಇರಾನ್ ಹಾಗೂ ಸೆನೆಗಲ್ ತಂಡಗಳಿಗೆ ಜಯ ಲಭಿಸಿವೆ. ಇರಾನ್ ತಂಡ ವೇಲ್ಸ್ ತಂಡವನ್ನು ೨-೦ ಗೋಲ್‌ಗಳಿಂದ ಮಣಿಸಿದರೆ, ಆತಿಥೇಯ ಕತಾರ್ ವಿರುದ್ಧ ಸೆನೆಗಲ್ ತಂಡ ೩-೦ ಗೋಲ್‌ಗಳ ವಿಜಯ ಸಾಧಿಸಿತು.
ಅಹಮದ್ ಅಲಿ ಸ್ಟೇಡಿಯಮ್‌ನಲ್ಲಿ ಬಿ ಗುಂಪಿನಲ್ಲಿರುವ ಇರಾನ್ ಹಾಗೂ ವೇಲ್ಸ್ ತಂಡಗಳ ನಡುವೆ ಹಣಾಹಣಿ ನಡೆಯಿತು. ಪೂರ್ಣ ೯೦ ನಿಮಿಷಗಳ ಅವಧಿಯಲ್ಲಿ ಯಾವುದೇ ಗೋಲ್ ದಾಖಲಾಗದ ಹಿನ್ನೆಲೆಯಲ್ಲಿ ಹೆಚ್ಚುವರಿ ೧೩ ನಿಮಿಷಗಳ ಸಮಯ ನೀಡಲಾಯಿತು. ಅಂತೆಯೇ ಹೆಚ್ಚುವರಿ ೮ನೇ ನಿಮಿಷದಲ್ಲಿ ಇರಾನ್ ತಂಡದ ರೌಜೆಬ್ ಚೆಶ್ಮಿ ಗೋಲ್ ದಾಖಲಿಸಿದರೆ, ೧೧ನೇ ನಿಮಿಷದಲ್ಲಿ ರಮಿನ್ ರಿಜಾಯನ್ ಗೋಲ್ ಬಾರಿಸುವ ಮೂಲಕ ವಿಜಯ ತಂದುಕೊಟ್ಟರು. ಈ ಮೂಲಕ ಹಾಲಿ ವಿಶ್ವ ಕಪ್‌ನ ಎರಡನೇ ಪಂದ್ಯದಲ್ಲಿ ಇರಾನ್ ತಂಡ ವಿಜಯ ಸಾಧಿಸಿ ಒಟ್ಟಾರೆ ೩ ಅಂಕಗಳನ್ನು ಸಂಪಾದಿಸಿತು. ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇರಾನ್ ಸೋಲು ಕಂಡಿತ್ತು.
ಎ ಗುಂಪಿನ ಪಂದ್ಯದಲ್ಲಿ ಆತಿಥೇಯ ಕತಾರ್ ತಂಡ ಸೆನೆಲ್‌ಗೆ ೧-೩ ಗೋಲ್‌ಗಳಿಂದ ಮಣಿಯಿತು. ಸೆನೆಗಲ್ ತಂಡದ ಪರ ಬೌಲೆ ಡಿಯಾ (೪೧ ನಿಮಿಷ), ಫಾರ್ಮರಾ ಡಿಯೊಡಿಯು (೪೮ನೇ ನಿಮಿಷ), ಬಂಬಾ ಡೆಂಗ್ (೮೪ನೇ ನಿಮಿಷ) ಒಂದೊಂದು ಗೋಲ್‌ಗಳನ್ನು ಬಾರಿಸಿದರು. ಕತಾರ್ ತಂಡದ ಪರ ೭೮ನೇ ನಿಮಿಷದಲ್ಲಿ ಮೊಹಮ್ಮದ್ ಮುನಾತರಿ ಏಕೈಕ ಗೋಲ್ ಬಾರಿಸಿದರು. ಕತಾರ್ ತಂಡಕ್ಕೆ ಹಾಲಿ ವಿಶ್ವ ಕಪ್‌ನಲ್ಲಿ ಎರಡನೇ ಸೋಲಾಗಿದ್ದು, ಈಕ್ವೆಡಾರ್ ವಿರುದ್ಧ ೨-೦ ಗೋಲ್‌ಗಳಿಂದ ಸೋಲು ಕಂಡಿತ್ತು.
ಇದನ್ನೂ ಓದಿ | MS Dhoni | ಫಿಫಾ ವಿಶ್ವ ಕಪ್ ಸ್ಟೇಡಿಯಮ್‌ನಲ್ಲಿ ಧೋನಿ ಅಭಿಮಾನಿಗಳ ಕಲರವ, ಜರ್ಸಿ ಹಿಡಿದು ಸಂಭ್ರಮ