ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಕೂಟದಲ್ಲಿ ಪಂದ್ಯ ಮುಕ್ತಾಯವಾದ ಬಳಿಕ ಜಪಾನ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಸ್ವಚ್ಛತಾ ಕಾರ್ಯ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಫಿಫಾ ವಿಶ್ವ ಕಪ್ ಟೂರ್ನಿಯ ಬುಧವಾರದ ಜರ್ಮನಿ ಮತ್ತು ಜಪಾನ್ ವಿರುದ್ಧದ ಪಂದ್ಯ ಮುಕ್ತಾಯವಾದ ಬಳಿಕ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಜಪಾನ್ ಅಭಿಮಾನಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಇನ್ನು ಈ ಪಂದ್ಯದಲ್ಲಿ ಜಪಾನ್ ತಂಡ ಬಲಿಷ್ಠ ಜರ್ಮನಿಯನ್ನು 2-1 ಅಂತರದಿಂದ ಮಣಿಸಿ ಮೇಲುಗೈ ಸಾಧಿಸಿತ್ತು.
ಜಪಾನ್ ಅಭಿಮಾನಿಗಳು ಸ್ಟೇಡಿಯಂನಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಬಹ್ರೇನ್‌ನ ಪತ್ರಕರ್ತ ಒಮರ್ ಫಾರೂಕ್, ಯಾಕೆ ನೀವು ಹೀಗೆ ಸ್ಟೇಡಿಯಂ ಸ್ವಚ್ಛಗೊಳಿಸುತ್ತಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಪಾನಿಗರು ಮುಕ್ತವಾದ ಸ್ಥಳದಲ್ಲಿ ಕಸಗಳನ್ನು ಬಿಸಾಡುವುದು ಒಳ್ಳೆಯದಲ್ಲ. ಹೀಗಾಗಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ಉತ್ತರಿಸಿ ತಮ್ಮ ಕಾರ್ಯ ಮುಂದುವರಿಸಿದ್ದರು. ಜಪಾನಿಗರ ಈ ಸ್ವಚ್ಛತಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಪಂದ್ಯ ಮುಕ್ತಾಯವಾದ ಬಳಿಕ ಹಲವು ಫುಟ್ಬಾಲ್ ಅಭಿಮಾನಿಗಳು ತಿಂಡಿ-ತಿನಿಸುಗಳ ಪ್ಲಾಸ್ಟಿಕ್ ಕವರ್ಗಳನ್ನು ಸ್ಡೇಡಿಯಂನಲ್ಲಿ ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದರು. ಆದರೆ ಜಪಾನ್ ಫುಟ್ಬಾಲ್ ಅಭಿಮಾನಿಗಳು ಪ್ಲಾಸ್ಟಿಕ್, ಗ್ಲಾಸ್ ಮತ್ತು ಫ್ಲ್ಯಾಗ್ ಇತರ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಜಗತ್ತಿಗೆ ಸ್ವಚ್ಛತಾ ಪಾಠ ಹೇಳಿದರು.
ಇದನ್ನೂ ಓದಿ | FIFA World Cup Qatar 2022 | ಫಿಫಾ ವಿಶ್ವಕಪ್ ಪಂದ್ಯಗಳು ನಡೆಯುವ ಟಾಪ್ 5 ಸ್ಟೇಡಿಯಂ