ದೋಹಾ: ಒಂದಲ್ಲ ಒಂದು ವಿವಾದಿಂದ ಸುದ್ದಿಯಲ್ಲಿರುವ ಕತಾರ್ ಫಿಪಾ ವಿಶ್ವ ಕಪ್ಗೆ ಇದೀಗ ಮತ್ತೊಂದು ಕಳಂಕ ಎದುರಾಗಿದೆ. ಕಾಮನಬಿಲ್ಲು ಶರ್ಟ್ ಧರಿಸಿ ವಿಶ್ವ ಕಪ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಯತ್ನಿಸಿದ ಅಮೆರಿಕದ ಪತ್ರಕರ್ತರ ಗ್ರಾಂಟ್ ವಾಲ್ ಅವರನ್ನು ತಡೆದ ಘಟನೆಗೆ ಆಕ್ರೋಶ ವ್ಯಕ್ತವಾಗಿದೆ.
ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿರುವ ದೇಶದಲ್ಲಿ ಎಲ್‌ಜಿಬಿಟಿಕ್ಯೂ (LGBTQ) ಸಮುದಾಯವನ್ನು ಬೆಂಬಲಿಸಲು ಮುಂದಾದ ಕಾರಣ ಮಾಜಿ ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಪತ್ರಕರ್ತ ಗ್ರಾಂಟ್ ವಾಲ್ ಅವರನ್ನು ತಡೆಯಲಾಗಿದೆ. ಕತಾರ್ ಈ ಟೂರ್ನಿ ಆರಂಭಕ್ಕೂ ಮುನ್ನವೇ ಎಲ್‌ಜಿಬಿಟಿಕ್ಯೂ ಸಮುದಾಯವನ್ನು ಬೆಂಬಲಿಸಿ ಮೈದಾನಕ್ಕೆ ಪ್ರವೇಶಿಸಬಾರದು ಎಂದು ಆದೇಶ ಹೊರಡಿಸಿತ್ತು. ಆದರೆ ಸೋಮವಾರ ಅಲ್ ರಯಾನ್ನಲ್ಲಿರುವ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೇಲ್ಸ್ ವಿರುದ್ಧದ ಅಮೆರಿಕ ಪಂದ್ಯದ ವೇಳೆ ಗ್ರಾಂಟ್ ವಾಲ್ ಅವರು ಎಲ್‌ಜಿಬಿಟಿಕ್ಯೂ ಸಮುದಾಯವನ್ನು ಬೆಂಬಲಿಸುವ ಸಲುವಾಗಿ ಕಾಮನಬಿಲ್ಲು ಶರ್ಟ್ ಧರಿಸಿ ಮೈದಾನಕ್ಕೆ ಪ್ರವೇಶಿಸಲು ಮುಂದಾಗಿದ್ದಾರೆ ಈ ವೇಳೆ ಸಂಘಟಕರು ಅವರನ್ನು ತಡೆದು ಬದಲಿ ಶರ್ಟ್ ಧರಿಸಿ ಪ್ರವೇಶಿಸುವಂತೆ ಹೇಳಿದ್ದಾರೆ. ಇದಕ್ಕೆ ಗ್ರಾಂಟ್ ವಾಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ಟ್ವೀಟ್ ಮಾಡಿದ ಗ್ರಾಂಟ್ ವಾಲ್ “ತನ್ನ ಫೋನ್ ಕಿತ್ತುಕೊಳ್ಳಲಾಗಿದೆ. ಆದರೆ ನಾನು ಕ್ಷೇಮವಾಗಿದ್ದೇನೆ. ಇದು ಅನಗತ್ಯವಾದ ಕೃತ್ಯವಾಗಿತ್ತು. ಘಟನೆ ಬಳಿಕ ಇದೀಗ ಫಿಫಾ ಪ್ರತಿನಿಧಿ ತನ್ನ ಬಳಿ ಕ್ಷಮೆಯಾಚಿಸಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Fifa World Cup | ಇರಾನ್ ಮೇಲೆ ಗೋಲಿನ ಸುರಿಮಳೆಗೈದ ಇಂಗ್ಲೆಂಡ್; ವಿಶ್ವ ಕಪ್ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ