ಕೊಚ್ಚಿ: ಇನ್ನೇನು ಕೆಲವೇ ಗಂಟೆಗಳಲ್ಲಿ ಕತಾರ್ನಲ್ಲಿ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯ ಆರಂಭವಾಗಲಿದೆ. ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲ್ಲಿ ನಿಂತಿದ್ದಾರೆ. ಇದೀಗ ಮೆಸ್ಸಿಯ ಕೇರಳದ ಅಪ್ಪಟ ಅಭಿಮಾನಿಗಳು ನೂರು ಅಡಿ ಆಳ ಸಮುದ್ರದಲ್ಲಿ ಕಟೌಟ್ ನಿಲ್ಲಿಸಿ ಎಲ್ಲಡೆ ಸುದ್ದಿಯಾಗಿದ್ದಾರೆ.
ಅರ್ಜೆಂಟೀನಾ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ, ಕತಾರ್ ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಸ್ಪರ್ಧಾತ್ಮಕ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಲಿದ್ದಾರೆ, ಭಾನುವಾರ ನಡೆಯಲಿರುವ ಫ್ರಾನ್ಸ್ ವಿರುದ್ಧದ ಫೈನಲ್ ಪಂದ್ಯ ಅವರಿಗೆ ಕೊನೆಯ ಮ್ಯಾಚ್ ಆಗಲಿದೆ. ಹಾಗಾಗಿ, ಅವರ ಅಭಿಮಾನಿಗಳು ಈ ಪಂದ್ಯವನ್ನು ಬಹಳ ಕಾತರದಿಂದ ಎದುರು ನೋಡುತ್ತಿದ್ದಾರೆ.
ಅಂತಿಮ ವಿಶ್ವ ಕಪ್ ಪಂದ್ಯವನ್ನಾಡುತ್ತಿರುವ ಮೆಸ್ಸಿಗೆ ಕೇರಳದ ಅಭಿಮಾನಿಗಳು ಅವರ ಕಟೌಟನ್ನು ಅರಬ್ಬಿ ಸಮುದ್ರದಲ್ಲಿ 100 ಅಡಿ ಆಳದಲ್ಲಿ ನಿರ್ಮಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ಜತೆಗೆ ಈ ಪಂದ್ಯದಲ್ಲಿ ಗೆದ್ದು ಮೆಸ್ಸಿ ಸ್ಮರಣೀಯ ವಿದಾಯ ಹೇಳಬೇಕು ಎಂದು ಹಾರೈಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಸ್ಸಿ ಅಭಿಮಾನಿಗಳು ಲಕ್ಷದ್ವೀಪದಲ್ಲಿ 100 ಅಡಿ ಆಳದಲ್ಲಿ ಮೆಸ್ಸಿ ಕಟೌಟ್ ಅನ್ನು ಇರಿಸಿದ ವಿಡಿಯೊವನ್ನು ಸಾಧಿಕ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಮೆಸ್ಸಿ ಅಭಿಮಾನಿಗಳು ಅರ್ಜೆಂಟೀನಾ ತಂಡದ ಸಮವಸ್ತ್ರ ಧರಿಸಿ ಮೆಸ್ಸಿ ಕಟೌಟ್ ಸುತ್ತ ಈಜುತ್ತಾ ಮೋಜು ಮಾಡಿದ್ದಾರೆ.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ನೆಚ್ಚಿನ ತಂಡ ಯಾವುದು; ರಾಹುಲ್ ಹೇಳಿದ ಉತ್ತರವೇನು?