ಲುಸೈಲ್: ನಾಕೌಟ್ ಹಂತಕ್ಕೇರಲು ಮಹತ್ವದ ಪಂದ್ಯದಲ್ಲಿ ಆಡಲಿಳಿದ ಮೆಕ್ಸಿಕೊ ತಂಡ ಸೌದಿ ಅರೇಬಿಯಾ ವಿರುದ್ಧ ಎರಡು ಗೋಲುಗಳನ್ನು ಸಿಡಿಸಿ ಜಯ ಸಾಧಿಸಿದರೂ, ಗೋಲು ವ್ಯತ್ಯಾಸದ ಆಧಾರದಲ್ಲಿ 16ನೇ ಘಟ್ಟಕ್ಕೇರುವಲ್ಲಿ ವಿಫಲವಾಗಿ ಟೂರ್ನಿಯಿಂದ(Fifa World Cup) ಹೊರಬಿದ್ದಿದೆ. ಇದರೊಂದಿಗೆ 1978ರ ಬಳಿಕ ಇದೇ ಮೊದಲ ಬಾರಿ ಮೆಕ್ಸಿಕೊ ತಂಡ ಗುಂಪು ಹಂತದಿಂದಲೇ ಹೊರಬಿದ್ದ ಅವಮಾನಕ್ಕೆ ಸಿಲುಕಿತು.
ಬುಧವಾರ ನಡೆದ ಈ ಪಂದ್ಯದಲ್ಲಿ ಕೇವಲ ಐದು ಸೆಕೆಂಡ್‍ಗಳ ಅಂತರದಲ್ಲಿ ಎರಡು ಗೋಲುಗಳನ್ನು ಸಿಡಿಸಿ ಸೌದಿ ಅರೇಬಿಯಾ ವಿರುದ್ಧ ಮೆಕ್ಸಿಕೊ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಆದರೆ ಗೋಲು ವ್ಯತ್ಯಾಸ ಆಧಾರದಲ್ಲಿ ಮತ್ತು ಪೋಲೆಂಡ್ ವಿರುದ್ಧ ಅರ್ಜೆಂಟೀನಾ ಜಯ ಸಾಧಿಸಿದ ಕಾರಣ ಅದೃಷ್ಟ ಕೈಕೊಟ್ಟಿತು. ಅಂತಿಮವಾಗಿ ಟೂರ್ನಿಯಿಂದ ಹೊರಬಿದ್ದಿತು.
ಮಧ್ಯಂತರ ವಿರಾಮದ ಬಳಿಕ ಆಕ್ರಮಣಕಾರಿ ಆಟವಾಡಿದ ಮೆಕ್ಸಿಕೋ ತಂಡ ಹೆನ್ರಿ ಮಾರ್ಟಿನ್ ಮತ್ತು ಲೂಯಿಸ್ ಚವೇಸ್ ಅವರು ಎರಡು ಗೋಲುಗಳನ್ನು ಬಾರಿಸಿ ನಾಕೌಟ್ಗೇರುವ ಆಸೆಯನ್ನು ಜೀವಂತವಾಗಿರಿಸಿದರು. ಆದರೆ ಸೌದಿ ಅರೇಬಿಯಾದ ಸಲೀಂ ಅಲ್ ದೌಸಾರಿ ಹೊಡೆದ ಗೋಲಿನಿಂದಾಗಿ ಮೊಕ್ಸಿಕೋದ ನಾಕೌಟ್ ಕನಸು ನುಚ್ಚುನೂರಾಯಿತು. ಇನ್ನೊಂದೆಡೆ ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಪೋಲೆಂಡ್ 2-0 ಗೋಲುಗಳಿಂದ ಸೋತರೂ ಗೋಲು ಅಂತರದ ಆಧಾರದಲ್ಲಿ ನಾಕೌಟ್ಗೆ ಮುನ್ನಡೆಯಿತು.
ಇದನ್ನೂ ಓದಿ | Fifa World Cup | ಪೋಲೆಂಡ್ ವಿರುದ್ಧ ಗೆಲುವು; ನಾಕೌಟ್ ಪ್ರವೇಶಿಸಿದ ಅರ್ಜೆಂಟೀನಾ