ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವ ಕಪ್(Fifa World Cup) ನ ಶುಕ್ರವಾರದ ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಬ್ರೆಜಿಲ್ ಮತ್ತು ಕ್ರೊವೇಷ್ಯಾ ತಂಡಗಳು ಮುಖಾಮುಖಿಯಗಲಿದೆ. ಈ ಪಂದ್ಯದಲ್ಲಿ ನೇಮರ್ ಅವರಿಗೆ ಬ್ರೆಜಿಲ್ ತಂಡದ ಮಾಜಿ ಶ್ರೇಷ್ಠ ಫುಟ್ಬಾಲ್ ಆಟಗಾರ ಪೀಲೆ ಅವರ ದಾಖಲೆಯೊಂದನ್ನು ಸರಿಗಟ್ಟುವ ಮತ್ತು ಮುರಿಯುವ ಅವಕಾಶವೊಂದಿದೆ.
ಗಾಯದ ಬಳಿಕ ಚೇತರಿಸಿಕೊಂಡು ಉತ್ತಮ ಫಾರ್ಮ್ನಲ್ಲಿರುವ ನೇಮರ್ ಅವರಿಗೆ ಬ್ರೆಜಿಲ್ ಪರ ಗರಿಷ್ಠ ಗೋಲು ಹೊಡೆದಿರುವ ಪೀಲೆ ದಾಖಲೆ (77 ಗೋಲು) ಸಮಗಟ್ಟಲು ಇನ್ನೊಂದು ಗೋಲಿನ ಅವಶ್ಯಕತೆಯಿದೆ. ನೇಮಾರ್ ತನ್ನ 76ನೇ ಗೋಲನ್ನು ದಕ್ಷಿಣ ಕೊರಿಯ ವಿರುದ್ಧ ಹೊಡೆದಿದ್ದರು ಮತ್ತು ಅದನ್ನು ಪೀಲೆ ಅವರಿಗೆ ಅರ್ಪಿಸಿದ್ದರು. ಒಂದೊಮ್ಮೆ ಈ ಪಂದ್ಯದಲ್ಲಿ ನೇಮರ್ ಎರಡು ಗೋಲ್ ಬಾರಿಸಿದರೆ ಆಗ ಪೀಲೆ ಅವರ ದಾಖಲೆ ಮುರಿಯಲ್ಪಡುತ್ತದೆ.
ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿರುವ 82 ವರ್ಷದ ಪೀಲೆ, ಸದ್ಯ ಸಾವೊ ಪಾಲೊ ಆಲ್ಬರ್ಟ್ ಐನ್‌ಸ್ಟಿನ್ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಳೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡ ದಕ್ಷಿಣ ಕೊರಿಯವನ್ನು 4-1 ಗೋಲುಗಳಿಂದ ಮಣಿಸಿ ಈ ಗೆಲುವನ್ನು ಆಟಗಾರರು ಪೀಲೆ ಅವರಿಗೆ ಅರ್ಪಿಸಿದ್ದರು. ಇದೀಗ ಈ ಪಂದ್ಯದಲ್ಲಿಯೂ ಮೇಲುಗೈ ಸಾಧಿಸಿ ಪೀಲೆ ಅವರ ವಿಶ್ವ ಕಪ್ ಆಸೆಯನ್ನು ನನಸು ಮಾಡುವ ಯೋಜನೆಯಲ್ಲಿದೆ ನೇಮರ್ ಪಡೆ.
ಲೊವ್ರೆನ್ ಮತ್ತು ನೇಮಾರ್ ಕಾದಾಟ!
ಬ್ರೆಜಿಲ್ ಮತ್ತು ಕ್ರೊವೇಷ್ಯಾ ವಿರುದ್ಧದ ಈ ಹೋರಾಟವನ್ನು ಡೆಜಾನ್ ಲೊವ್ರೆನ್ ಮತ್ತು ನೇಮರ್ ನಡುವಣ ಸೆಣಸಾಟವೆಂದು ಪರಿಗಣಿಸಲಾಗಿದೆ. 33ರ ಹರೆಯದ ಲೊವ್ರೆನ್ ಮತ್ತು ನೇಮರ್ ಈ ವರೆಗೆ ಪರಸ್ಪರ ಮೂರು ಬಾರಿ ಮುಖಾಮುಖಿಯಾಗಿದ್ದರೂ ಬ್ರೆಝಿಲ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಲಿಲ್ಲ. ಇದೀಗ ಈ ಪಂದ್ಯದುದಕ್ಕೂ ಉಭಯ ಆಟಗಾರರ ಮಧ್ಯೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | Fifa World Cup | ಇಂದಿನಿಂದ ಫಿಫಾ ಕಾಲ್ಚೆಂಡಿನ ಕಾಳಗದಲ್ಲಿ ಕ್ವಾರ್ಟರ್ ಫೈನಲ್ ಕಾದಾಟ