Site icon Vistara News

Fifa World Cup| ಫಿಫಾ ವಿಶ್ವಕಪ್​ ಸೋಲಿನ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ನೇಮರ್​

neymar fifa

ದೋಹಾ: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್(Fifa World Cup) ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಬ್ರೆಜಿಲ್ ತಂಡವು ಅಚ್ಚರಿ ಎಂಬಂತೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ತನ್ನ ಅಭಿಯಾನ ಮುಗಿಸಿತ್ತು. ಈ ಸೋಲಿನಿಂದ ನೇಮರ್​ ಮೈದಾನದಲ್ಲೆ ಕಣ್ಣೀರು ಸುರಿಸಿ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಇದೀಗ ಸಂಕಷ್ಟದ ಸಮಯದಲ್ಲಿ ತಂಡ​ ಪರ ನಿಂತ ಅಭಿಮಾನಿಗಳಿಗೆ ನೇಮರ್​ ಧನ್ಯವಾದ ತಿಳಿಸಿದ್ದಾರೆ.

ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು “ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಂಡ ಸೋತಿರುವುದು ನನ್ನನ್ನು ತುಂಬಾ ಕಾಡುತ್ತಿದೆ. ಆದ್ದರಿಂದ ನಾನು ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಈ ನೋವು ದೀರ್ಘ ಕಾಲ ನನ್ನ ಮನಸ್ಸಿನಲ್ಲಿ ಉಳಿಯಲಿದೆ” ಆದರೂ ನಮ್ಮ ಬೆಂಬಲಕ್ಕೆ ನಿಂತ ಎಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ”. ಎಂದು ಹೇಳಿದ್ದಾರೆ.

“ನಾವು ಪಂದ್ಯವನ್ನು ಗೆಲ್ಲಲು ಕೊನೆಯ ಕ್ಷಣದವರೆಗೂ ಹೋರಾಡಿದ್ದೆವು. ಈ ಪಂದ್ಯವನ್ನು ಗೆದ್ದೇ ಗೆಲ್ಲುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದೆವು. ಅದಕ್ಕಾಗಿ ಸಾಕಷ್ಟು ಶ್ರಮ ಕೂಡ ವಹಿಸಿದ್ದೆವು. ಆದರೆ ಅದೃಷ್ಟ ನಮ್ಮ ಪರವಾಗಿರಲಿಲ್ಲ. ಇದರಿಂದ ನಾವು ಸೋಲು ಕಂಡೆವು. ಮೈದಾನದಲ್ಲಿ ಆಟಗಾರರು ಪರಸ್ಪರ ತೋರಿದ ಪ್ರೀತಿ ಹಾಗೂ ತ್ಯಾಗ ಅಗಾಧವಾಗಿತ್ತು. ನಮಗೆ ಸದಾ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ” ಎಂದು ನೇಮರ್ ಹೇಳಿದ್ದಾರೆ.

ಕ್ರೊಯೇಷ್ಯಾ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಮರ್ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸಿ ಬ್ರೆಜಿಲ್ ಪರ 77 ಗೋಲು ಬಾರಿಸಿದರು. ಆ ಮೂಲಕ ಫುಟ್ಬಾಲ್ ದಿಗ್ಗಜ ಪೀಲೆ ಅವರ ದಾಖಲೆಯನ್ನು ಮುರಿದಿದ್ದರು. ಆದರೆ ಪೆನಾಲ್ಟಿ ಶೂಟೌಟ್​ನಲ್ಲಿ 4-2 ಅಂತರದಿಂದ ಸೋತು ಬ್ರೆಜಿಲ್​ ತಂಡ ವಿಶ್ವ ಕಪ್​ನಿಂದ ಹೊರಬಿದ್ದಿತ್ತು.

ಇದನ್ನೂ ಓದಿ | Fifa World Cup | ಇಂಗ್ಲೆಂಡ್​ಗೆ ಸೋಲಿನ ಶಾಕ್​; ಫ್ರಾನ್ಸ್​ಗೆ ಸೆಮಿಫೈನಲ್​ ಟಿಕೆಟ್​

Exit mobile version