ಬ್ಯೂನಸ್ ಐರಿಸ್: 36 ವರ್ಷಗಳ ಬಳಿಕ ಅರ್ಜೆಂಟೀನಾ ತಂಡವನ್ನು ಫಿಫಾ ವಿಶ್ವ(Fifa World Cup ) ಚಾಂಪಿಯನ್ ಮಾಡಿದ ಲಿಯೋನೆಲ್ ಮೆಸ್ಸಿ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇದೀಗ ಈ ಗೆಲುವಿನ ಗೌರವವಾಗಿ ಅರ್ಜೆಂಟೀನಾ ಸರ್ಕಾರ ತನ್ನ ದೇಶದ ನೋಟಿನ ಮೇಲೆ ಮೆಸ್ಸಿ ಚಿತ್ರವನ್ನು ಮುದ್ರಿಸುವ ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಅರ್ಜೆಂಟೀನಾ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಜಾರಿಗೆ ತಂದು ಅಲ್ಲಿನ ನೋಟಿನ ಮೇಲೆ ಮೆಸ್ಸಿಯ ಚಿತ್ರವನ್ನು ಮುದ್ರಿಸಿದರೆ ಬಹುಶಃ ಆಟಗಾರನೊಬ್ಬನ ಫೋಟೊ ದೇಶದ ಕರೆನ್ಸಿ ಮೇಲೆ ಮುದ್ರಣಗೊಳ್ಳುವುದು ಇತಿಹಾದಲ್ಲಿ ಇದೇ ಮೊದಲು ಎಂಬ ಖ್ಯಾತಿಗೆ ಮೆಸ್ಸಿ ಪಾತ್ರರಾಗಲಿದ್ದಾರೆ.
ಅಧಿಕೃತವಾಗಿಲ್ಲ
ಹೆಚ್ಚಾಗಿ ಪ್ರಮುಖ ಪ್ರಶಸ್ತಿ ಗೆದ್ದ ಬಳಿಕ ಆಟಗಾರರಿಗೆ ಆ ದೇಶದ ಸರ್ಕಾರ ಅತ್ಯನ್ನತ ಪ್ರಶಸ್ತಿ ನೀಡಿ ಗೌರವಿಸುವುದು ವಾಡಿಕೆ. ಆದರೆ ಇದೀಗ ದೇಶದ ನೋಟಿನ ಮೇಲೆ ಆಟಗಾರನೊಬ್ಬನ ಫೋಟೊ ಅಚ್ಚೊತ್ತುವ ವಿಷಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಲಿದೆ. ಆದರೆ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಅರ್ಜೆಂಟೀನಾದ ಸರ್ಕಾರಿ ಇಲಾಖೆಯಲ್ಲಿ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.