Site icon Vistara News

Fifa World Cup| ಕಾಲ್ಚೆಂಡಿನ ಕಾಳಗಕ್ಕೆ ಕತಾರ್​, ಈಕ್ವೆಡಾರ್ ಸಜ್ಜು​; ಯಾರಿಗೆ ಒಲಿಯಲಿದೆ ಗೆಲುವು?

fifa world cup 2022

ದೋಹಾ: ಕಾಲ್ಚೆಂಡಿನ ಕಲರವ ಫಿಫಾ ವಿಶ್ವ ಕಪ್(Fifa World Cup 2022)​ಗೆ ಕ್ಷಣಗಣನೆ ಆರಂಭವಾಗಿದ್ದು ಭಾನುವಾರ ಈ ವರ್ಣರಂಜಿತ ಜಾತ್ರೆಗೆ ಚಾಲನೆ ದೊರೆಯಲಿದೆ. ದೋಹಾದ ಅಲ್‌ ಬೈತ್‌ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ತಂಡಗಳು ಎದುರಾಗಲಿದ್ದು, ಉಭಯ ತಂಡಗಳು ಶುಭಾರಂಭದ ನಿರೀಕ್ಷೆಯಲ್ಲಿವೆ.

ಭಾನುವಾರ ನಡೆಯಲಿರುವ ‘ಎ’ ಗುಂಪಿನ ಪಂದ್ಯದಲ್ಲಿ ಇತ್ತಂಡಗಳು ಕಾದಾಟ ನಡೆಸಲಿದ್ದು ಅಂಕ ಪಟ್ಟಿಯಲ್ಲಿ ಖಾತೆ ತೆರೆಯುವುದು ಉಭಯ ತಂಡಗಳ ಗುರಿಯಾಗಿದೆ. ಆಫ್ರಿಕನ್‌ ಚಾಂಪಿಯನ್‌ ಸೆನೆಗಲ್‌ ಮತ್ತು ನೆದರ್ಲೆಂಡ್ಸ್‌ ತಂಡಗಳು ‘ಎ’ ಗುಂಪಿನಲ್ಲಿವೆ. ಅವುಗಳ ಸವಾಲು ಮೀರಿ ನಿಲ್ಲುವುದು ಅಷ್ಟು ಸುಲಭವಲ್ಲ. ಆದ್ದರಿಂದ ಈ ಪಂದ್ಯದಲ್ಲಿ ಗೆದ್ದರಷ್ಟೇ ನಾಕೌಟ್‌ ಹಂತ ಪ್ರವೇಶಿಸುವ ಸಾಧ್ಯತೆಯಿದೆ ಎಂಬುದರ ಅರಿವು ಎರಡೂ ತಂಡಗಳಿಗೆ ಇವೆ. ಏಕೆಂದರೆ ಪ್ರತಿ ಗುಂಪಿನಿಂದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಮಾತ್ರ ನಾಕೌಟ್‌ ಹಂತ ಪ್ರವೇಶಿಸಲಿವೆ.

ಕತಾರ್​ ನೆಚ್ಚಿನ ತಂಡ

ಫಿಫಾ ಶ್ರೇಯಾಂಕದಲ್ಲಿ ಆತಿಥೇಯ ಕತಾರ್​ 50 ಹಾಗೂ ಈಕ್ವೆಡಾರ್​ 44ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಇದುವರೆಗೆ ಮೂರು ಸಲ ಎದುರಾಗಿದ್ದು, ತಲಾ ಒಂದರಲ್ಲಿ ಗೆದ್ದು ಸಮಬಲ ಸಾಧಿಸಿವೆ. ಇನ್ನೊಂದು ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. 2018ರಲ್ಲಿ ದೋಹಾದಲ್ಲಿ ಕೊನೆಯ ಬಾರಿ ಎದುರಾಗಿದ್ದಾಗ ಕತಾರ್‌ 4-3 ಗೋಲುಗಳ ಅಂತರದಿಂದ ಮೇಲುಗೈ ಸಾಧಿಸಿತ್ತು. ಈ ಲೆಕ್ಕಾಚಾರದಲ್ಲಿ ಕತಾರ್​ ಗೆಲುವಿನ ನೆಚ್ಚಿನ ತಂಡವಾಗಿದೆ. ಜತೆಗೆ ತವರು ನೆಲದ ಪ್ರೇಕ್ಷಕರ ಬೆಂಬಲವೂ ಕತಾರ್‌ ತಂಡಕ್ಕಿದೆ. 2019ರ ಏಷ್ಯಾ ಕಪ್‌ ಚಾಂಪಿಯನ್‌ ತಂಡದ ಸ್ಟ್ರೈಕರ್​ಗಳಾದ ಅಕ್ರಮ್‌ ಅಫೀಫ್ ಮತ್ತು ಅಲ್ಮೋಜ್‌ ಅಲಿ ತಂಡದ ನೆಚ್ಚಿನ ಆಟಗಾರರಾಗಿದ್ದಾರೆ.

ಗೆಲುವಿನ ಸಂಪ್ರದಾಯ ಮುಂದುವರಿಸುತ್ತಾ ಕತಾರ್​

ಫಿಫಾ ಫುಟ್ಬಾಲ್​ ವಿಶ್ವ ಕಪ್‌ಗೆ ಆತಿಥ್ಯ ವಹಿಸಿದ್ದ ಯಾವುದೇ ದೇಶಗಳು ಮೊದಲ ಪಂದ್ಯವನ್ನು ಸೋತ ಇತಿಹಾಸವಿಲ್ಲ. ಆ ಸಂಪ್ರದಾಯವನ್ನು ಮುಂದುವರಿಸಬೇಕಾದ ಸವಾಲು ಕತಾರ್‌ ಮುಂದಿದೆ. ಟೂರ್ನಿಗೆ ಆತಿಥ್ಯ ವಹಿಸಿರುವುದರಿಂದ ಕತಾರ್‌ ತಂಡ ವಿಶ್ವ ಕಪ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಆದರೆ ಈಕ್ವೆಡಾರ್, ದಕ್ಷಿಣ ಅಮೆರಿಕದಂತಹ ಅತ್ಯಂತ ಬಲಿಷ್ಠ ತಂಡಗಳ ವಿರುದ್ಧ ಗೆಲುವಿನ ಹರ್ಡಲ್ಸ್​ ದಾಟಿ ಬಂದಿದೆ ಎಂಬುದೊಂದು ಕುತೂಹಲ.

ಈಕ್ವೆಡಾರ್‌ ತಂಡಕ್ಕೆ ಇದು ನಾಲ್ಕನೇ ವಿಶ್ವ ಕಪ್‌ ಟೂರ್ನಿ. ಒಮ್ಮೆ ಮಾತ್ರ ನಾಕೌಟ್‌ ಹಂತ ಪ್ರವೇಶಿಸಿದೆ. 2006ರ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿತ್ತು.

ಪಂದ್ಯ ಆರಂಭ: ರಾತ್ರಿ 9.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನೆಮಾ

ಇದನ್ನೂ ಓದಿ | Fifa World Cup | ಫುಟ್ಬಾಲ್‌ ವಿಶ್ವ ಕಪ್‌ ಪಂದ್ಯಗಳು ನಡೆಯುವ ಸ್ಟೇಡಿಯಮ್‌ಗಳು ಯಾವುದೆಲ್ಲ ಗೊತ್ತೇ?

Exit mobile version