ದೋಹಾ: ಬದಲಿ ಆಟಗಾರನಾಗಿ ಕಣಕ್ಕಿಳಿದ ಸ್ಟ್ರೈಕರ್ ಗೊನ್ಕಾಲೊ ರಾಮೋಸ್ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡ ಸ್ವಿಜರ್ಲ್ಯಾಂಡ್ ವಿರುದ್ಧ 6-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ. ಮುಂದಿನ ಕ್ವಾರ್ಟರ್ ಫೈನಲ್ ಕದನದಲ್ಲಿ ಸ್ಪೇನ್ ಗೆ ಆಘಾತವಿಕ್ಕಿದ ಮೊರೊಕ್ಕೋ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.
ಬುಧವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಪೋರ್ಚುಗಲ್ನ 21 ವರ್ಷ ವಯಸ್ಸಿನ ರಮೋಸ್ ಅತ್ಯದ್ಭುತ ಪ್ರದರ್ಶನದ ತೋರಿದರು. ಈ ಪ್ರದರ್ಶನದ ನೆರವಿನಿಂದ ಸ್ವಿಜರ್ಲ್ಯಾಂಡ್ ತಂಡವನ್ನು ಪೋರ್ಚ್‍ಗಲ್ 6-1 ಗೋಲುಗಳಿಂದ ಸದೆಬಡಿಯಿತು. ಜತೆಗೆ 2006ರ ಬಳಿಕ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆ ಮಾಡಿತು.
ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸ್ಥಾನದಲ್ಲಿ ಆಡಲಿಳಿದ ರಮೋಸ್ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಈ ಪಂದ್ಯವನ್ನು ಸ್ಮರಣೀಯವಾಗಿಸಿದರು. ಮೊದಲ ವಿಶ್ವಕಪ್ ಆಡುತ್ತಿರುವ ರಮೋಸ್, 17ನೇ ನಿಮಿಷದಲ್ಲೇ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಬಳಿಕ ಪೇಪ್ 33ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ ತಂಡದ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. 51ನೇ ನಿಮಿಷದಲ್ಲಿ ತಮ್ಮ 2ನೇ ಗೋಲು ಸಾಧಿಸಿದ ರಮೋಸ್ ಅವರಿಂದ ಸ್ಫೂರ್ತಿ ಪಡೆದ ರಫೀಲ್ ಕ್ಯುರಿರೊ ಮುನ್ನಡೆಯನ್ನು 4-0 ಗೆ ಏರಿಸಿದರು. 58ನೇ ನಿಮಿಷದಲ್ಲಿ ಸ್ವಿಜರ್ಲ್ಯಾಂಡ್ನ ಮ್ಯಾನ್ಯುಯಲ್ ಅಕಾಂಜಿ ಎದುರಾಳಿ ತಂಡದ ಏಕೈಕ ಗೋಲು ಬಾರಿಸಿದರು.
ರಮೋಸ್ 67ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಪ್ರಸಕ್ತ ವಿಶ್ವಕಪ್‍ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂದ್ಯ ಮುಕ್ತಾಯದ ಅವಧಿಯಲ್ಲಿ ಬದಲಿ ಆಟಗಾರ ರಫೀಲ್ ಲಿಯೊ ಮತ್ತೊಂದು ಗೋಲು ಗಳಿಸಿದರು. ಇಲ್ಲಿಗೆ ಪೋರ್ಚುಗಲ್ ಕೈ ಮೇಲಾಯಿತು. ಪಂದ್ಯದುದಕ್ಕೂ ರೊನಾಲ್ಡೊ ಅನುಪಸ್ಥಿತಿ ಕಾಡಲೇ ಇಲ್ಲ.
ಇದನ್ನೂ ಓದಿ | FIFA World Cup | ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶ ಪಡೆದು ಇತಿಹಾಸ ಸೃಷ್ಟಿಸಿದ ಮೊರಾಕ್ಕೊ ತಂಡ