ದೋಹಾ: ಕ್ರಿಸ್ಟಿಯಾನೊ ರೊನಾಲ್ಡೊ ಅವರು ಗುರುವಾರ ರಾತ್ರಿ ನಡೆದ ಫಿಫಾ ವಿಶ್ವ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐದು ವಿಶ್ವ ಕಪ್ ಟೂರ್ನಿಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಸಾಧನೆಗೆ ಭಾಜನರಾದರು. ಅವರ ಈ ಆಟದ ನೆರವಿನಿಂದ ಪೋರ್ಚುಗಲ್ ತಂಡ 3-2 ಗೋಲುಗಳಿಂದ ಘಾನಾ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಬ್ರೆಜಿಲ್‌ನ ಪೆಲೆ, ಜರ್ಮನಿಯ ಉವೆ ಸೀಲೆರ್ ಮತ್ತು ಮಿರೊಸ್ಲಾವ್ ಕ್ಲೋಸ್ ಅವರೊಂದಿಗೆ ನಾಲ್ಕು ಫಿಫಾ ವಿಶ್ವ ಕಪ್ ಟೂರ್ನಿಗಳಲ್ಲಿ ಗೋಲು ಬಾರಿಸಿ ದಾಖಲೆಯನ್ನು ಹಂಚಿಕೊಂಡಿದ್ದ ರೊನಾಲ್ಡೊ ಇದೀಗ ಐದನೇ ವಿಶ್ವ ಕಪ್ ಟೂರ್ನಿಯಲ್ಲಿ ಗೋಲು ಗಳಿಸಿ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ರೊನಾಲ್ಡೊ ಅವರನ್ನು 64ನೇ ನಿಮಿಷದಲ್ಲಿ ಎದುರಾಳಿ ಆಟಗಾರ ಬೀಳಿಸಿದ್ದಕ್ಕೆ ರೆಫರಿ ಪೆನಾಲ್ಟಿ ಕಿಕ್ ಅವಕಾಶ ನೀಡಿದರು. ಇದನ್ನು ಸಮರ್ಥವಾಗಿ ಬಳಿಸಿಕೊಂಡ ಅವರು ಗೋಲು ದಾಖಲಿಸಿ ಈ ಸಾಧನೆ ಮೆರೆದರು.
ತೀವ್ರ ಪೈಪೋಟಿ
ಪೋರ್ಚುಗಲ್ ತಂಡ ಮೊದಲ ಗೋಲ್ ಬಾರಿಸಿದ ಕೆಲವೇ ಕ್ಷಣದಲ್ಲಿ ಘಾನಾ ತಂಡದ ಆಂಡ್ರೆ ಅಯೇವ್(73ನೇ ನಿಮಿಷದಲ್ಲಿ) ಗೋಲ್ ಬಾರಿಸಿ ಪಂದ್ಯವನ್ನು ಸಮಬಲದಕ್ಕೆ ತಂದರು. ಮತ್ತೆ ಆಕ್ರಮಣಕಾರಿ ಆಟ ಮುಂದುವರಿಸಿದ ಪೋರ್ಚುಗಲ್, ಐದೇ ನಿಮಿಷಗಳಲ್ಲಿ ಮತ್ತೆ ಮುನ್ನಡೆ ಗಳಿಸಿತು. ಜಾವೊ ಫೆಲಿಕ್ಸ್ 78ನೇ ನಿಮಿಷದಲ್ಲಿ ಎದುರಾಳಿ ಗೋಲ್‌ಕೀಪರ್ ಅವರನ್ನು ಚಾಣಾಕ್ಷತನದಿಂದ ವಂಚಿಸಿ ಚೆಂಡನ್ನು ಗುರಿ ಸೇರಿಸಿದರು. ಇದಾದ ಎರಡು ನಿಮಿಷಗಳ ಬಳಿಕ ರಫಾಯೆಲ್ ಲಿಯೊ ಅವರು ಮತ್ತೊಂದು ಗೋಲ್ ಬಾರಿಸಿ ತಂಡಕ್ಕೆ 3-1 ಮುನ್ನಡೆ ತಂದು ಕೊಟ್ಟರು.
ಪ್ರತಿ ಹೋರಾಟ ನಡೆಸಿದ ಘಾನಾ 89ನೇ ನಿಮಿಷದಲ್ಲಿ ಒಸ್ಮಾನ್ ಬುಕಾರಿ ಗೋಲು ಗಳಿಸಿ ಹಿನ್ನಡೆಯನ್ನು 2-3ಕ್ಕೆ ತಗ್ಗಿಸಿ ಸಮಬಲದ ಗೋಲಿಗೆ ಪ್ರಯತ್ನಿಸಿದರೂ, ಅಂತಿಮವಾಗಿ ಪೋರ್ಚುಗಲ್ ಡಿಫೆಂಡರ್‌ಗಳ ರಕ್ಷಣಾತ್ಮಕ ಆಟದ ಮುಂದೆ ಶರಣಾದರು.
ಇದನ್ನೂ ಓದಿ | Fifa world Cup | ಫಿಫಾ ವಿಶ್ವ ಕಪ್ನಲ್ಲಿ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫುಟ್ಬಾಲ್ ಅಭಿಮಾನಿಗಳು!