Site icon Vistara News

FIFA World Cup | ಪೋಲೆಂಡ್‌ಗೆ ಮಣಿದ ಸೌದಿ ಅರೇಬಿಯಾ, ಆಸ್ಟ್ರೇಲಿಯಾಗೆ ಟ್ಯುನೀಷಿಯಾ ವಿರುದ್ಧ ಜಯ

FIFA WORLD CUP

ದೋಹಾ : ಫಿಫಾ ವಿಶ್ವ ಕಪ್‌ನಲ್ಲಿ (FIFA World Cup) ಶನಿವಾರ ನಾಲ್ಕು ಪಂದ್ಯಗಳು ನಡೆದವು. ಅದರಲ್ಲಿ ಮೊದಲೆರಡು ಪಂದ್ಯಗಳಲ್ಲಿ ಪೋಲೆಂಡ್‌ ಹಾಗೂ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದವು. ಸೌದಿ ಅರೇಬಿಯಾ ತಂಡವನ್ನು ಪೋಲೆಂಡ್ ೨-೦ ಗೋಲ್‌ಗಳಿಂದ ಮಣಿಸಿದರೆ, ಆಸ್ಟ್ರೇಲಿಯಾ ತಂಡ ೧-೦ ಗೋಲ್‌ಗಳಿಂದ ಟ್ಯುನೀಷಿಯಾ ವಿರುದ್ಧ ಗೆಲುವು ಕಂಡಿತು.

ಸಿ ಗುಂಪಿನಲ್ಲಿರುವ ಸೌದಿ ಅರೇಬಿಯಾ ತಂಡ ವಿಶ್ವ ಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಮಣಿಸಿ ಅಚ್ಚರಿ ಮೂಡಿಸಿತ್ತು. ಅದಕ್ಕಾಗಿ ಅಲ್ಲಿನ ದೊರೆ ಆಟಗಾರರಿಗೆ ರೊಲ್ಸ್‌ ರಾಯ್ಸ್‌ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಆದರೆ, ಶನಿವಾರದ ಪಂದ್ಯದಲ್ಲಿ ಅದೇ ಲಯ ಉಳಿಸಿಕೊಳ್ಳಲು ಸಾಧ್ಯವಾಗದೇ ಪೋಲೆಂಡ್‌ಗೆ ಮಣಿಯಿತು. ಪೋಲೆಂಡ್ ಪರ ಪಿಯೊಟ್ರ್‌ ಝೆಲೆನ್‌ಸ್ಕಿ (೩೯ನೇ ನಿಮಿಷ) ಹಾಗೂ ರಾಬರ್ಟ್‌ ಲೆವೊಂಡಸ್ಕಿ (೮೨ನೇ ನಿಮಿಷ) ತಲಾ ಒಂದು ಗೋಲ್‌ ಬಾರಿಸಿ ತಂಡದ ಗೆಲುವಿಗೆ ನೆರವಾದರು.

ಶೇಕಡಾ ೬೪ ಚೆಂಡಿನ ಮೇಲೆ ಹಿಡಿತ, ೫೩೩ ಪಾಸ್‌ಗಳು, ಐದು ಬಾರಿ ಕಾರ್ನರ್‌ ಅವಕಾಶ ಪಡೆಯುವ ಮೂಲಕ ಮೈದಾನದಲ್ಲಿ ಹೆಚ್ಚು ಪ್ರಾಬಲ್ಯ ಸಾಧಿಸಿದ್ದ ಸೌದಿ ಅರೇಬಿಯಾ ತಂಡದ ಆಟಗಾರರು ಗೋಲ್‌ ಬಾರಿಸಲು ವಿಫಲಗೊಂಡರು.

ಅಲ್ ಜನೌಬ್‌ ಸ್ಟೇಡಿಯಮ್‌ನಲ್ಲಿ ನಡೆದ ಡಿ ಗುಂಪಿನ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ವಿರೋಚಿತ ಗೆಲುವು ತನ್ನದಾಗಿಸಿಕೊಂಡಿತು. ಟ್ಯುನೀಷಿಯಾ ತಂಡದ ಆಟಗಾರರು ನಿಖರ ಹಾಗೂ ಕೆಚ್ಚೆದೆಯ ಪ್ರದರ್ಶನ ನೀಡಿದ ಹೊರತಾಗಿಯೂ ಎದುರಾಳಿಯ ಗೋಲ್‌ ಪೋಸ್ಟ್‌ ಒಳಗೆ ಚೆಂಡು ನುಗ್ಗಿಸಲು ವಿಫಲಗೊಂಡರು. ಮಿಚೆಲ್‌ ಡ್ಯೂಕ್‌ (೨೩ನೇ ನಿಮಿಷ) ಬಾರಿಸಿದ ಏಕೈಕ ಗೋಲ್‌ ಅಸ್ಟ್ರೇಲಿಯಾದ ಗೆಲುವಿನ ಗೋಲ್‌ ಎನಿಸಿಕೊಂಡಿತು.

ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್​ ಟೂರ್ನಿಯಿಂದ ಹೊರಬಿದ್ದ ಆತಿಥೇಯ ಕತಾರ್​​

Exit mobile version