ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್(Fifa World Cup) ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಸೆಮಿಪೈನಲ್ ಪ್ರವೇಶಿಸಿದೆ. ಈ ಮೂಲಕ ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಆಸೆ ಜೀವಂತವಿರಿಸಿದೆ.
ಅಲ್ ಖೊರ್‌ನಲ್ಲಿರುವ ಅಲ್ ಬೈತ್ ಕ್ರೀಡಾಂಗಣದಲ್ಲಿ ಶನಿವಾರ ತಡ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಫ್ರಾನ್ಸ್ ತಂಡ ಗೆಲುವು ದಾಖಲಿಸಿದೆ. ಮುಂದಿನ ಸೆಮಿಫೈನಲ್ ಪಂದ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸೆಮಿಫೈನಲ್ ತಲುಪಿದ ಮೊರಾಕ್ಕೊ ವಿರುದ್ಧ ಕಾದಾಟ ನಡೆಸಲಿದೆ. ದಿನದ ಮೊದಲ ಪಂದ್ಯದಲ್ಲಿ ಮೊರೊಕ್ಕೊ ತಂಡ ಪೋರ್ಚುಗಲ್ಗೆ ಆಘಾತವಿಕ್ಕಿತ್ತು.
ಸಮಬಲದ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲಿ ಆಟ ಮುಗಿಯಲು ಕೇವಲ 12 ನಿಮಿಷಗಳಿದ್ದಾಗ ಫ್ರಾನ್ಸ್‌ನ ಅತ್ಯಧಿಕ ಗೋಲುಗಳ ಸರದಾರ ಗಿರಾಡ್ ಗೋಲು ಗಳಿಸಿ ತಂಡದ ಗೆಲುವನ್ನು ಸಾರಿದರು. ಇದಕ್ಕೂ ಮುನ್ನ ಇಂಗ್ಲೆಂಡಿನ ಹ್ಯಾರಿ ಕೇನ್ 54ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್ ಮೂಲಕ ಗೋಲು ಗಳಿಸಿ 1-1 ಸಮಬಲಕ್ಕೆ ಕಾರಣರಾಗಿದ್ದರು. 17ನೇ ನಿಮಿಷದಲ್ಲೇ ಅರುಲಿನ್ ಚೊಮೇನಿಯ ಬಾರಿಸಿದ ಗೋಲಿನ ಮೂಲಕ ಫ್ರಾನ್ಸ್ 1-0 ಗೋಲಿನ ಖಾತೆ ತೆರೆಯಿತು.
ಕೇನ್ ಅವರು ಈ ಪಂದ್ಯದಲ್ಲಿ ಗೋಲು ಬಾರಿಸಿಸುವ ಮೂಲಕ ತಮ್ಮ 53ನೇ ಅಂತಾರಾಷ್ಟ್ರೀಯ ಗೋಲು ದಾಖಲಿಸಿದ ಸಾಧನೆ ಮಾಡಿದರು. ಈ ಮೂಲಕ ಇಂಗ್ಲೆಂಡ್ ಪರ ಅತ್ಯಧಿಕ ಗೋಲು ಗಳಿಸಿದ ವೇನ್ ರೂನಿ ಅವರ ದಾಖಲೆಯನ್ನು ಸರಿಗಟ್ಟಿದರು. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಅದ್ಭುತ ಪ್ರದರ್ಶನ ತೋರಿದರೂ ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ವಿಫಲವಾಯಿತು.
ಇದನ್ನೂ ಓದಿ | FIFA World Cup | ಸೋಲಿನ ಬೇಸರಕ್ಕೆ ಕಣ್ಣೀರು ಹಾಕಿದ ಸ್ಟಾರ್ ಫುಟ್ಬಾಲ್ ಆಟಗಾರ ರೊನಾಲ್ಡೊ