Site icon Vistara News

Fifa World Cup | ಸ್ವಿಜರ್ಲೆಂಡ್ ನಾಕೌಟ್​ಗೆ; ಬ್ರೆಜಿಲ್​ ವಿರುದ್ಧ ಕ್ಯಾಮರೂನ್​ಗೆ ಐತಿಹಾಸಿಕ ಜಯ

Fifa World Cup

ದೋಹಾ: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್​ ಟೂರ್ನಿಯ ಶುಕ್ರವಾರ ತಡರಾತ್ರಿ ನಡೆದ ಜಿ ಗುಂಪಿನ ಎರಡು ಪಂದ್ಯಗಳಲ್ಲಿ ಸ್ವಿಜರ್ಲೆಂಡ್ ಮತ್ತು ಕ್ಯಾಮರೂನ್​ ತಂಡಗಳು ಗೆಲುವು ಸಾಧಿಸಿದೆ. ಸ್ವಿಜರ್ಲೆಂಡ್ ತಂಡ ಸರ್ಬಿಯಾವನ್ನು ಮಣಿಸಿದರೆ, ಕ್ಯಾಮರೂನ್​ ತಂಡ ಬಲಿಷ್ಠ ಬ್ರೆಜಿಲ್​ಗೆ ಸೋಲಿನ ಶಾಕ್​ ನೀಡುವಲ್ಲಿ ಯಶಸ್ವಿ ಕಂಡಿತು.

ಮೂರನೇ ಬಾರಿಗೆ ನಾಕೌಟ್​ ಪ್ರವೇಶಿಸಿದ ಸ್ವಿಜರ್ಲೆಂಡ್

ಕ್ಸೆರ್ದಾನ್ ಶಾಕಿರಿ 974 ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸೆರ್ಬಿಯಾ ವಿರುದ್ಧ 3-2 ಗೋಲುಗಳ ಜಯ ಸಾಧಿಸಿದ ಸ್ವಿಜರ್ಲೆಂಡ್ ಸತತ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತ ತಲುಪಿದೆ. ‘ಜಿ’ ಗುಂಪಿನ ಎರಡನೇ ಸ್ಥಾನಿಯಾಗಿ ಅಂತಿಮ 16ರ ಘಟ್ಟಕ್ಕೆ ಮುನ್ನಡೆದ ಸ್ವಿಸ್ ತಂಡ ಪ್ರಿಕ್ವಾರ್ಟರ್ ಫೈನಲ್‍ನಲ್ಲಿ ರೊನಾಲ್ಡೊ ಸಾರಥ್ಯದ ಪೋರ್ಚ್‍ಗಲ್ ವಿರುದ್ಧ ಸೆಣಸಲಿದೆ.

ಪಂದ್ಯದ 20ನೇ ನಿಮಿಷದಲ್ಲಿ ಝೆರ್ಡಾನ್​ ಶಾಕಿರಿ ಬಾರಿಸಿದ ಗೋಲಿನಿಂದ ಸ್ವಿಜರ್ಲೆಂಡ್ ಮುನ್ನಡೆ ಸಾಧಿಸಿತು. ಆದರೆ ಕೇವಲ 10 ನಿಮಿಷ ಅಂತರದಲ್ಲಿ ಅಜೆಕ್ಸಾಂಡರ್ ಮಿಟ್ರೊವಿಕ್ ಮತ್ತು ದುಸಾನ್ ವಾಲೋವಿಕ್ ಅವರ ಆಕ್ರಮಣಕಾರಿ ಆಟದ ನೆರವಿನಿಂದ ಎರಡು ಗೋಲುಗಳನ್ನು ಗಳಿಸಿದ ಸೆರ್ಬಿಯಾ ಪ್ರತಿದಾಳಿ ನಡೆಸಿ ಮುನ್ನಡೆ ಗಳಿಸಿತು. ಆದರೆ ಎರಡನೇ ಅವಧಿ ಮುಗಿಯುವ ಮುನ್ನ ಬ್ರೆಲ್ ಎಂಬೊಲೊ ಪಂದ್ಯಕ್ಕೆ ಮತ್ತೊಂದು ಟ್ವಿಸ್ಟ್ ನೀಡಿ, ಸ್ವಿಸ್ ತಂಡ ಸಮಬಲ ಸಾಧಿಸಲು ನೆರವಾದರು. ಕೊನೆಯ ಅವಧಿಯ ಮೂರನೇ ನಿಮಿಷದಲ್ಲೇ ರೆಮೊ ಫ್ರೂಲರ್ ಮತ್ತೊಂದು ಗೋಲು ಬಾರಿಸಿ ಸ್ವಿಸ್ ತಂಡಕ್ಕೆ ಗೆಲುವು ದೊರಕಿಸಿಕೊಟ್ಟರು.

ಕ್ಯಾಮರೂನ್​ಗೆ ಐತಿಹಾಸಿಕ ಗೆಲುವು

ದಿನದ ಮತ್ತೊಂದು ರೋಚಕ ಪಂದ್ಯದಲ್ಲಿ ಈ ಬಾರಿಯ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾದ​ ಬಲಿಷ್ಠ ಬ್ರೆಜಿಲ್​​ ವಿರುದ್ಧ ಕ್ಯಾಮರೂನ್​ ತಂಡ 1-0 ಅಂತರದಿಂದ ಮೇಲುಗೈ ಸಾಧಿಸುವ ಮೂಲಕ ಐತಿಹಾಸಿಕ ಗೆಲುವೊಂದನ್ನು ದಾಖಲಿಸಿತು.

ಅತ್ಯಂತ ರೋಚಕತೆಯಿಂದ ಸಾಗಿದ ಈ ಪಂದ್ಯದಲ್ಲಿ ಉಭಯ ತಂಡಗಳು ಮೊದಲಾರ್ಧದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ಕಾರಣ ಗೋಲು ರಹಿತವಾಗಿ ಅಂತ್ಯ ಕಂಡಿತು. ಆದರೆ ಪಂದ್ಯದ ಅಂತಿಮ ಕ್ಷಣದಲ್ಲಿ ಕ್ಯಾಮರೂನ್​ ತಂಡದ ಆಟಗಾರ ವಿನ್ಸೆಂಟ್​ ಅಬೂಬಕರ್(90+2)​ ಸಿಡಿಸಿದ ಒಂದು ಗೋಲ್​ ಬ್ರೆಜಿಲ್​ ಸೋಲಿಗೆ ಕಾರಣವಾಯಿತು. ಸ್ಟಾರ್​ ಆಟಗಾರರನ್ನೇ ನೆಚ್ಚಿಕೊಂಡಿದ್ದ ಬ್ರೆಜಿಲ್​ಗೆ ಕ್ಯಾಮರೂನ್​ ಆಟಗಾರರ ಸವಾಲನ್ನು ಯಾವ ಹಂತದಲ್ಲಿಯೂ ಮೆಟ್ಟಿನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಕ್ಯಾಮರೂನ್​ ಈ ಗೆಲುವಿನ ಹೊರತಾಗಿಯೂ ನಾಕೌಟ್​ ಪ್ರವೇಶಿಸುವಲ್ಲಿ ವಿಫಲವಾಯಿತು.

ಇದನ್ನೂ ಓದಿ | FIFA World Cup | ಘಾನಾ ವಿರುದ್ಧ ಗೆದ್ದರೂ ವಿಶ್ವ ಕಪ್‌ನ ನಾಕೌಟ್‌ ಹಂತದಿಂದ ಹೊರಕ್ಕೆ ಬಿದ್ದ ಉರುಗ್ವೆ

Exit mobile version