ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ನ ಭಾನುವಾರ ನಡೆಯಲಿರುವ ಫೈನಲ್ ಪಂದ್ಯ ತಾನಾಡಲಿರುವ ಕೊನೆಯ ಪಂದ್ಯವಾಗಿದ್ದು ಆ ಬಳಿಕ ನಿವೃತ್ತಿಯಾಗಲಿದ್ದೇನೆ ಎಂದು ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದೃಢಪಡಿಸಿದ್ದಾರೆ.
ಮಂಗಳವಾರ ತಡ ರಾತ್ರಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ತಂಡ 3-0 ಗೋಲುಗಳಿಂದ ಕ್ರೊಯೇಶಿಯಾವನ್ನು ಸೋಲಿಸುವ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿದೆ. ಪಂದ್ಯದ ಬಳಿಕ ಮಾತನಾಡಿದ ತಂಡದ ನಾಯಕ ಲಿಯೊನೆಲ್ ಮೆಸ್ಸಿ, ಫೈನಲ್ನಲ್ಲಿ ನನ್ನ ಕೊನೆಯ ಪಂದ್ಯ ಆಡುವ ಮೂಲಕ ನನ್ನ ವಿಶ್ವ ಕಪ್ ಪಯಣವನ್ನು ಸ್ಮರಣೀಯವಾಗಿ ಮುಗಿಸುತ್ತಿರುವುದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
“ಈ ಸಾಧನೆ ನನಗೆ ಖುಷಿ ತಂದಿದೆ. ಹಲವು ವರ್ಷಗಳ ಬಳಿಕ ಮುಂದಿನ ವಿಶ್ವಕಪ್ ನಡೆಯುತ್ತದೆ. ಅಲ್ಲಿ ಇಂತಹ ಸಾಧನೆ ಮಾಡಲಾಗುತ್ತದೆ ಎಂದು ನನಗೆ ಅನಿಸುತ್ತಿಲ್ಲ. ಈ ರೀತಿ ವಿದಾಯ ಹೇಳುವುದು ಅತ್ಯುತ್ತಮ ಎನಿಸುತ್ತದೆ. ಆರಂಭದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತಾಗ ನಮ್ಮ ತಂಡದ ವಿಶ್ವಾಸ ಕುಗ್ಗಲಿಲ್ಲ. ಬದಲಾಗಿ ಈ ಸೋಲು ನಮ್ಮಲ್ಲಿ ಇನ್ನಷ್ಟು ಬಲಶಾಲಿಯಾಗುವಂತೆ ಮಾಡಿತು” ಎಂದು ಮೆಸ್ಸಿ ಹೇಳಿದರು.
ಭಾನುವಾರ ಚಾಂಪಿಯನ್ ಪಕ್ಕಾ
“ನಮ್ಮ ತಂಡ ಆಡಿರುವ ಐದು ಫೈನಲ್‌ಗಳಲ್ಲಿ ಟ್ರೋಫಿ ಗೆದ್ದಿದೆ. ಭಾನುವಾರ ಕೂಡ ಟ್ರೋಫಿ ಗೆಲುವು ನಮ್ಮದಾಗುತ್ತದೆ ಎಂಬ ಆಶಯದಲ್ಲಿದ್ದೇನೆ. ಇದಕ್ಕಾಗಿ ನಮ್ಮ ತಂಡ ಎಲ್ಲ ಸಿದ್ಧತೆ ನಡೆಸಿದೆ. ಫೈನಲ್ನಲ್ಲಿ ಗೆಲುವು ಸಾಧಿಸುವ ಮೂಲಕ ನಮ್ಮ ತಂಡದ ದಿಗ್ಗಜ ಡಿಗೋ ಮರಡೋನಾ ಅವರಿಗೆ ಈ ಗೆಲುವನ್ನು ಅರ್ಪಿಸಲು ನಾವು ಸಜ್ಜಾಗಿದ್ದೇವೆ” ಎಂದು ಮೆಸ್ಸಿ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ | FIFA World Cup | ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ ವಿಶ್ವ ಕಪ್ ಫೈನಲ್ಗೆ