ದೋಹಾ : ಕ್ರೊವೇಷಿಯಾ ತಂಡ ಫಿಫಾ ವಿಶ್ವ ಕಪ್ನ (FIFA WORLD CUP) ಪ್ಲೇಆಫ್ ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರನೇ ಸ್ಥಾನ ಪಡೆದುಕೊಂಡಿದೆ. ಶನಿವಾರ ರಾತ್ರಿ ನಡೆದ ಮೂರನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಮೊರಾಕ್ಕೊ ವಿರುದ್ಧ 2-1 ಗೋಲ್ಗಳ ವಿಜಯ ಸಾಧಿಸಿ ಅಗ್ರ 3ನೇ ಸ್ಥಾನ ಪಡೆಯಲು ಸಫಲಗೊಂಡಿತು. ಈ ಮೂಲಕ ವಿಶ್ವ ಕಪ್ ಇತಿಹಾಸದಲ್ಲಿ ಮೂರನೇ ಬಾರಿ ಟಾಪ್ 3 ಸ್ಥಾನ ಗಿಟ್ಟಿಸಿಕೊಂಡಿತು. ಕಳೆದ ಆವೃತ್ತಿಯ ವಿಶ್ವ ಕಪ್ನಲ್ಲಿ ಕ್ರೊವೇಷಿಯಾ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದರೆ, 1998ರಲ್ಲಿ ನೆದರ್ಲೆಂಡ್ಸ್ ತಂಡವನ್ನು 2-1 ಗೋಲ್ಗಳಿಂದ ಸೋಲಿಸಿ ಎರಡನೇ ರನ್ನರ್ಅಪ್ ಸ್ಥಾನ ಪಡೆದುಕೊಂಡಿತ್ತು. ಗೆದ್ದ ಕ್ರೊವೇಷಿಯಾ ತಂಡಕ್ಕೆ 225 ಕೋಟಿ ರೂಪಾಯಿ ಬಹುಮಾನ ಲಭಿಸಿದೆ. ಇದೇ ವೇಳೆ ನಾಲ್ಕನೇ ಸ್ಥಾನ ಪಡೆದ ಮೊರಾಕ್ಕೊಗೆ 205 ಕೋಟಿ ರೂಪಾಯಿ ಬಹುಮಾನ ನೀಡಲಾಯಿತು.
ಖಲಿಫಾ ಇಂಟರ್ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಕಂಚಿನ ಪದಕದ ಪಂದ್ಯವೂ ಜಿದ್ದಾಜಿದ್ದಿನಿಂದ ಕೂಡಿತ್ತು. ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲುಂಡಿದ್ದ ಇತ್ತಂಡಗಳಿಗೂ ಕನಿಷ್ಠ ಪಕ್ಷ ಒಂದು ಪ್ರಶಸ್ತಿಯನ್ನು ಗೆಲ್ಲುವ ಇರಾದೆಯಿತ್ತು. ಅಂತೆಯೇ ಮೊರಾಕ್ಕೊ ತಂಡ ದೊಡ್ಡ ಸಂಖ್ಯೆಯ ಅಭಿಮಾನಿಗಳು ಕತಾರ್ಗೆ ಆಗಮಿಸಿ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಆದರೆ, ಅಭಿಮಾನಿಗಳ ಬೆಂಬಲದಿಂದ ಆಫ್ರಿಕಾದ ದೇಶವಾದ ಮೊರಾಕ್ಕೊಗೆ ಹೆಚ್ಚಿನ ನೆರವಾಗಲಿಲ್ಲ.
ಪಂದ್ಯ ಆರಂಭಗೊಂಡ ಕೇವಲ 7 ನಿಮಿಷಗಳಲ್ಲಿ ಗೋಲ್ ಬಾರಿಸಿದ ಕ್ರೊವೇಷಿಯಾದ ಜೋಸ್ಕೊ ಗ್ವಾರ್ಡಿಯೋಲ್ ಗೆಲುವಿನ ಮುನ್ಸೂಚನೆ ಕೊಟ್ಟರು. ಆದರೆ, ಮೊರಾಕ್ಕೊ ತಂಡದ ಅಚ್ರಾಫ್ ದಾರಿ 9ನೇ ನಿಮಿಷದಲ್ಲಿ ಗೋಲ್ ಬಾರಿಸಿ ಸಮಬಲದ ಹೋರಾಟಕ್ಕೆ ಹಾದಿ ಮಾಡಿಕೊಟ್ಟರು. ಬಳಿಕ 42ನೇ ನಿಮಿಷದಲ್ಲಿ ಮಿಸ್ಲಾವ್ ಒರ್ಸಿಕ್ 47ನೇ ನಿಮಿಷದಲ್ಲಿ ಗೋಲ್ ಬಾರಿಸುವ ಮೂಲಕ ಮುನ್ನಡೆ ಕಲ್ಪಿಸಿದರು. ಅದಾದ ಬಳಿಕ ಯಾವುದೇ ಗೋಲ್ಗಳು ದಾಖಲಾಗದ ಕಾರಣ ಕ್ರೊವೇಷಿಯಾ ತಂಡಕ್ಕೆ ಜಯ ಲಭಿಸಿತು.
ಇದನ್ನೂ ಓದಿ | Fifa World Cup | ಫಿಫಾ ವಿಶ್ವ ಕಪ್ ಫೈನಲ್ಗೂ ಮುನ್ನ ಎಸ್ಬಿಐ ಪಾಸ್ಬುಕ್ ಫುಲ್ ಟ್ರೆಂಡ್; ಕಾರಣ ಏನು?