ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡ 188 ರನ್ಗಳಿಂದ ಮಣಿಸಿ ಗೆದ್ದು ಬೀಗಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದ ಮುನ್ನಡೆ ಸಾಧಿಸಿದೆ.
ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಹಂಗಾಮಿ ನಾಯಕ ಕೆ.ಎಲ್. ರಾಹುಲ್ ಕತಾರ್ನಲ್ಲಿ ಇಂದು(ಭಾನುವಾರ ಡಿ.18) ನಡೆಯಲಿರುವ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ವಿಶ್ವ ಕಪ್ ಫೈನಲ್ ಪಂದ್ಯದ ವೀಕ್ಷಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ರಾಹುಲ್ಗೆ ಫಿಫಾ ವಿಶ್ವ ಕಪ್ ಫೈನಲ್ನಲ್ಲಿ ಯಾವ ತಂಡವನ್ನು ಬೆಂಬಲಿಸುವುದಾಗಿ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ತಂಡದ ಬಹುತೇಕ ಆಟಗಾರರು ಬೆಂಬಲಿಸುತ್ತಿದ್ದ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಭಾರತದ ಹೆಚ್ಚಿನ ಆಟಗಾರರು ಬ್ರೆಜಿಲ್ ಮತ್ತು ಇಂಗ್ಲೆಂಡ್ ತಂಡದ ಅಭಿಮಾನಿಗಳಾಗಿದ್ದರು. ಆದರೆ ಈ ಎರಡೂ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ ಈಗ ನಾವು ಅಂತಿಮ ಪಂದ್ಯವನ್ನು ಬಾಂಗ್ಲಾ ವಿರುದ್ಧದ ಗೆಲುವಿನೊಂದಿಗೆ ಆನಂದಿಸುತ್ತೇವೆ ಎಂದಿದ್ದಾರೆ.
ಫೈನಲ್ನಲ್ಲಿರುವ ಅರ್ಜೆಂಟೀನಾವನ್ನು ಅಥವಾ ಫ್ರಾನ್ಸ್ ತಂಡವನ್ನು ಯಾರು ಬೆಂಬಲಿಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ಇಡೀ ತಂಡವು ಇಂದು ರಾತ್ರಿ ಡಿನ್ನರ್ ಜತೆ ಫೈನಲ್ ಪಂದ್ಯವನ್ನು ವೀಕ್ಷಿಸಲಿದೆ ಎಂದು ರಾಹುಲ್ ಹೇಳಿದ್ದಾರೆ. ಜತೆಗೆ ಬಾಂಗ್ಲಾ ವಿರುದ್ಧದ ಅಂತಿಮ ಪಂದ್ಯದಲ್ಲಿಯೂ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಭರಸೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ | Fifa World Cup | ಮೆಸ್ಸಿಯ ಕೊನೆಯ ವಿಶ್ವ ಕಪ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ ಫುಟ್ಬಾಲ್ ಜಗತ್ತು!