ಕೆಂಗೇರಿ (ಬೆಂಗಳೂರು): ರಾಜ್ಯ ಮಟ್ಟದ Kickboxing ಸ್ಪರ್ಧೆಯ ವೇಳೆ ಸ್ಪರ್ಧಿಯೊಬ್ಬರು ಎದುರಾಳಿಯ ಹೊಡೆತಕ್ಕೆ ತತ್ತರಿಸಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯ ವೇಳೆ ಈ ಘಟನೆ ನಡೆದಿದೆ. ರಿಂಗ್‌ನಲ್ಲೇ ಕೋಮಾ ಸ್ಥಿತಿಗೆ ತಲುಪಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೈಸೂರಿನ ೨೪ ವರ್ಷದ ನಿಖಿಲ್ ಸುರೇಶ್ ಮೃತಪಟ್ಟ ಕುಸ್ತಿಪಟು. ಜುಲೈ ೧೦ರಂದು ಈ ಘಟನೆ ನಡೆದಿದ್ದು, ಆಯೋಜಕರು ಸ್ಪರ್ಧಿಯ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಯಾಕಾಯಿತು ಸಾವು?
ಕರ್ನಾಟಕ ರಾಜ್ಯ Kickboxing ಸಂಸ್ಥೆಯು ಜುಲೈ ೯ ಮತ್ತು ೧೦ರಂದು ಕೆಂಗೇರಿಯಲ್ಲಿ K೧ ಕಿಕ್‌ಬಾಕ್ಸಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ಬೌಟ್ ಒಂದರಲ್ಲಿ ಪ್ರತಿಸ್ಪರ್ಧಿಯೊಬ್ಬರ ಬಲವಾದ ಪಂಚ್‌ಗೆ ನಿಖಿಲ್ ಸುರೇಶ್ ರಿಂಗ್‌ನಲ್ಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಕೋಮಾ ಸ್ಥಿತಿಯಿಂದ ಹೊರಬರದ ಅವರು ಜುಲೈ ೧೨ರಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೋಚ್ ಸಂತಾಪ
ನಿಖಿಲ್ ಸುರೇಶ್ ಅವರ ಕೋಚ್ ವಿಕ್ರಮ್ ನಾಗರಾಜ್ ಅವರು ನಿಧನಕ್ಕೆ ಸಂತಾಸ ಸೂಚಿಸಿದ್ದಾರೆ. ಅವರ ಹೇಳಿಕೆಯನ್ನು ಲಾಕರ್ ರೂಮ್ ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಪ್ರಕಟಿಸಲಾಗಿದೆ.
“ನನ್ನ ಹುಡುಗ ನಿಖಿಲ್ ಇಂದು ಬಾಕ್ಸಿಂಗ್ ಗ್ಲವ್ಸ್ ಕಳಚಿಟ್ಟಿದ್ದಾನೆ. ಅವನ ನಿರ್ಗಮನದ ಸುದ್ದಿಯನ್ನು ತಿಳಿಸಲು ವಿಷಾದ ಎನಿಸುತ್ತಿದೆ. ರಿಂಗ್‌ನಲ್ಲಿ ಅಸ್ವಸ್ಥಗೊಂಡಿದ್ದ ಅವನಿಗೆ ಸಾಕಷ್ಟು ವೈದ್ಯಕೀಯ ನೆರವು ನೀಡಿದ ಹೊರತಾಗಿಯೂ ಬದುಕುಳಿಯಲಿಲ್ಲ,ʼʼ ಎಂದು ಬರೆದುಕೊಂಡಿದ್ದಾರೆ.
ವೈದ್ಯಕೀಯ ಲೋಪ
ಕಿಕ್ ಬಾಕ್ಸಿಂಗ್‌ನಂಥ ಸ್ಪರ್ಧೆಗಳನ್ನು ಏರ್ಪಡಿಸುವಾಗ ತುರ್ತು ವೈದ್ಯಕೀಯ ಸೇವೆಯನ್ನು ಸ್ಥಳದಲ್ಲಿ ನಿಯೋಜಿಸಬೇಕಾಗುತ್ತದೆ. ಆದರೆ, ಕೋಚ್ ವಿಕ್ರಮ್ ನಾಗರಾಜ್ ಅವರು ಆರಂಭದಲ್ಲಿ ಹಾಕಿರುವ ಫೇಸ್‌ಬುಕ್ ಪೋಸ್ಟ್ ಪ್ರಕಾರ, ಸ್ಪರ್ಧೆ ನಡೆಯುತ್ತಿದ್ದ ಜಾಗದಲ್ಲಿ ತುರ್ತು ವೈದ್ಯಕೀಯ ಸಿಬ್ಬಂದಿ ಇರಲಿಲ್ಲ. ನಿಖಿಲ್ ಕುಸಿದುಬಿದ್ದ ಬಳಿಕ ಆಸ್ಪತ್ರೆ ತಲುಪಿ ಚಿಕಿತ್ಸೆ ದೊರೆಯುವ ನಡುವೇ ಸಾಕಷ್ಟು ವಿಳಂಬವಾಗಿದೆ ಎಂಬರ್ಥದಲ್ಲಿ ಬರೆದಿದ್ದರು. ಆದರೆ ಆಯೋಜಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಲಾಕರ್‌ರೂಮ್ ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಈ ಸಾವು ನ್ಯಾಯವೇ?
ಕಿಕ್ ಬಾಕ್ಸಿಂಗ್ ನೋಡಲು ಅಪಾಯಕಾರಿ ಸ್ಪರ್ಧೆ. ಹೀಗಾಗಿ ಸ್ಪರ್ಧೆಗೆ ಕಠಿಣ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಉದ್ದೇಶಪೂರ್ವಕವಾಗಿ ಎದುರಾಳಿಯ ಮೇಲೆ ದಾಳಿ ಮಾಡದಂತೆ ರೂಲ್ಸ್‌ಗಳನ್ನು ಇಡಲಾಗಿದೆ. ಆದಾಗ್ಯೂ ಕೆಲವೊಂದು ಬಾರಿ ಸ್ಪರ್ಧಿಗಳು ಕುಸಿದು ಬಿದ್ದು ಮೃತಪಡುವ ಘಟನೆಗಳು ನಡೆಯುತ್ತವೆ. ೨೦೧೮ರಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕೇರಳ ಮೂಲದ ಕಿಕ್ ಬಾಕ್ಸರ್ ಕೆ.ಕೆ. ಹರಿಕೃಷ್ಣನ್ ಎಂಬುವರು ರಿಂಗ್‌ನಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದರು. ಅಂತೆಯೇ, ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆದ ಮಹಿಳೆಯರ ವೃತ್ತಿಪರ ಕಿಕ್ ಬಾಕ್ಸಿಂಗ್‌ನಲ್ಲಿ ೨೬ ವರ್ಷದ ಸ್ಪರ್ಧಿ ಅಲೆಥಾ ಎಂಬುವರು ಎದುರಾಳಿಯ ಹೊಡೆತಕ್ಕೆ ತತ್ತರಿಸಿ ಮೃತಪಟ್ಟಿದ್ದರು.
ನಿಯಮವೇನು?
ಭಾರತದಲ್ಲಿ ಕಿಕ್ ಬಾಕ್ಸಿಂಗ್ ವೇಳೆ ಸ್ಪರ್ಧಿಯೊಬ್ಬರು ಮೃತಪಟ್ಟರೆ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಬಲ್ಲ ಮಾಹಿತಿಗಳ ಪ್ರಕಾರ, ಸ್ಪರ್ಧಿಯೊಬ್ಬ ಈ ಕ್ಷೇತ್ರಕ್ಕೆ ಧುಮುಕುವ ಮೊದಲು ಕರಾರುಗಳಿಗೆ ಸಹಿ ಹಾಕಬೇಕಾಗುತ್ತದೆ. ಅದರಲ್ಲಿ ಇಂಥ ಸಾವಿನ ಹೊಣೆಗಾರಿಕೆಯನ್ನು ತಾವೇ ವಹಿಸಿಕೊಳ್ಳಬೇಕಾಗುತ್ತದೆ. ಇದು ಉದ್ದೇಶಪೂರ್ವಕವಲ್ಲದ ಘಟನೆಯಾಗಿರುವ ಕಾರಣ ಎದುರಾಳಿಯ ಮೇಲೆ ಕೊಲೆ ಆರೋಪವೂ ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Liger Movie | ಗುಲಾಬಿ ಸಾಕು ಮಾನ ಮುಚ್ಚೋಕೆ! ಲೈಗರ್ ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ನಗ್ನಾವತಾರ