ಬರ್ಮಿಂಗ್ಹಮ್ : ಭಾರತದ ಮಹಿಳೆಯ ಹಾಕಿ ತಂಡಕ್ಕೆ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಶುಕ್ರವಾರ ಅನ್ಯಾಯದ ಸೋಲಿಗೆ ಒಳಗಾಗಿದೆ. ರೆಫರಿ ಮಾಡಿರುವ ಎಡವಟ್ಟಿನಿಂದಾಗ ಭಾರತ ವನಿತೆಯರು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತರು. ಇದೀಗ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್‌ಐಎಚ್) ಭಾರತ ತಂಡದ ಕ್ಷಮೆ ಕೋರಿದೆ. ಕ್ಷಮೆಯಿಂದ ಏನೂ ಪ್ರಯೋಜನ ಆಗಿಲ್ಲ. ಫೈನಲ್‌ಗೇರುವ ಅವಕಾಶ ನಷ್ಟವಾಗಿದ್ದು, ಕಂಚಿನ ಪದಕಕ್ಕಾಗಿ ಸೆಣಸಾಡಬೇಕಾಗಿದೆ.
ಶುಕ್ರವಾರ ರಾತ್ರಿ ನಡೆದ ಸೆಮಫೈನಲ್ ಪಂದ್ಯದ ಪೂರ್ಣ ಅವಧಿಯಲ್ಲಿ ಭಾರತ ವನಿತೆಯರ ತಂಡ ಹಾಗೂ ಎದುರಾಳಿ ಆಸ್ಟ್ರೇಲಿಯಾ ೧-೧ ಗೋಲ್‌ಗಳ ಸಮಬಲ ಸಾಧಿಸಿತ್ತು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಆಸ್ಟ್ರೇಲಿಯಾ ತಂಡ ಮೊದಲ ಗೋಲ್ ಬಾರಿಸುವ ಅವಕಾಶ ಪಡೆಯಿತು. ಅಂತೆಯೇ ರೆಫರಿ ಸೂಚನೆ ಕೊಟ್ಟ ತಕ್ಷಣ ಆಸೀಸ್ ಮಹಿಳೆಯರು ಗೋಲ್ ಪೋಸ್ಟ್‌ನೆಡೆಗೆ ಚೆಂಡನ್ನು ಬಾರಿಸಿದರು. ಭಾರತದ ನಾಯಕಿ ಸವಿತಾ ಪೂನಿಯಾ ಅದನ್ನು ತಡೆದರು. ಭಾರತ ತಂಡದ ಆಟಗಾರರು ಸಂಭ್ರಮಿಸುವ ಸಂದರ್ಭದಲ್ಲಿ ರೆಫರಿ, ಗೋಲ್ ಪ್ರಕ್ರಿಯೆ ಪರಿಪೂರ್ಣವಾಗಿರಲಿಲ್ಲ ಎಂದು ಹೇಳಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೆ ಹೊಸದಾಗಿ ಅವಕಾಶ ಮಾಡಕೊಟ್ಟಿದೆ. ಇದು ಭಾರತ ತಂಡದ ಬೇಸರಕ್ಕೆ ಕಾರಣವಾಯಿತು.
ನಂತರ ಸಿಕ್ಕಿದ ಅವಕಾಶವನ್ನು ಬಳಸಿಕೊಂಡ ಆಸ್ಟ್ರೇಲಿಯಾ ಸತತ ಮೂರು ಗೋಲ್‌ಗಳನ್ನು ಬಾರಿಸಿದರೆ, ಭಾರತಕ್ಕೆ ಗೋಲ್ ಬಾರಿಸಲು ಸಾಧ್ಯವೇ ಆಗಲಿಲ್ಲ. ಹೀಗಾಗಿ ೩-೦ ಅಂತರದಿಂದ ಸೋಲು ಕಂಡಿತು. ಆಸ್ಟ್ರೇಲಿಯಾ ಪರ ಅಂಬ್ರೋಸಿಯಾ ಮಲೊನೆ, ಕೈಟ್ಲಿನ್ ನಾಬ್ಸ್ ತಲಾ ಮೂರು ಗೋಲ್ ಹೊಡೆದರು.
ಅದಕ್ಕಿಂತ ಮೊದಲು ಪೂರ್ಣ ಅವಧಿಯಲ ಆಟದಲ್ಲಿ ಆಸ್ಟ್ರೇಲಿಯಾ ಪರ ರೆಬೆಕಾ ಗ್ರೇನರ್ (೧೦ನೇ ನಿಮಿಷ) ಹಾಗೂ ಭಾರತ ಪರ ವಂದನಾ ಕಟಾರಿಯಾ (೪೯ ನಿಮಿಷ) ಗೋಲ್ ಬಾರಿಸಿದರು.
ಭಾರತ ತಂಡ ಕಂಚಿನ ಪದಕಕ್ಕಾಗಿ ನ್ಯೂಜಿಲೆಂಡ್ ವಿರುದ್ಧ ಆಡಬೇಕಾಗಿದೆ.
ಕ್ಷಮೆ ಕೋರಿದ ಎಫ್‌ಐಎಚ್
ಆಗಿರುವ ಪ್ರಮಾದಕ್ಕೆ ಎಫ್‌ಐಚ್ ಕ್ಷಮೆ ಕೋರಿದೆ. ಶೂಟೌಟ್ ಗಡಿಯಾರ ಚಾಲನೆ ಪಡೆಯುವ ಮೊದಲೇ ರೆಫರಿ ಶೂಟೌಟ್ ಆರಂಭಿಸಲು ಸೂಚಿಸಿದ್ದಾರೆ. ಹೀಗಾಗಿ ಸಮಸ್ಯೆ ಉಂಟಾಗಿದೆ. ಆಗಿರುವ ಗೊಂದಲಕ್ಕೆ ವಿಷಾಧ ವ್ಯಕ್ತಪಡಿಸುತ್ತೇವೆ ಎಂದು ಎಫ್‌ಐಎಚ್ ಹೇಳಿದೆ.
ಇದನ್ನೂ ಓದಿ | CWG- 2022 | ಬಜರಂಗ್ ಪೂನಿಯಾಗೆ ಬಂಗಾರ, ಚಾಂಪಿಯನ್ ಪಟ್ಟ ಉಳಿಸಿಕೊಂಡ ಕುಸ್ತಿಪಟು