Site icon Vistara News

ICC World Cup 2023 : ಫೈನಲ್ ನರ್ವಸ್​; ಭಾರತದ ವಿಶ್ವ ಕಪ್​ ಸೋಲಿಗೆ ಕಾರಣಗಳೇನು?

Cricket final

ಅಹಮದಾಬಾದ್​​: ಭಾರತ ಕ್ರಿಕೆಟ್ ತಂಡ ಮತ್ತೊಂದು ಬಾರಿ ವಿಶ್ವ ಕಪ್ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿದೆ. ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ ಸೋಲು ಕಾಣುವ ಮೂಲಕ ಭಾರತ ತಂಡ ಐಸಿಸಿ ಟ್ರೋಫಿಯ ಬರವನ್ನು ನೀಗಿಸಲು ಇನ್ನಷ್ಟು ದಿನಗಳು ಕಾಯುವಂತಾಯಿತು. ಭಾರತ ತಂಡ ವಿಶ್ವ ಕಪ್ ಗೆಲ್ಲುವ ಫೇವರಿಟ್​ ತಂಡವಾಗಿತ್ತು. ಆದರೆ ಫೈನಲ್​ನಲ್ಲಿ (ICC World Cup 2023) ಭಾರತ ತಂಡದ ಆಟ ಅದಕ್ಕೆ ಪೂರಕವಾಗಿರಲಿಲ್ಲ. ತವರಿನ ಅಭಿಮಾನಿಗಳ ಮುಂದೆ ಟ್ರೋಫಿ ಗೆಲ್ಲುವ ಗೋಲ್ಡನ್ ಅಪರ್ಚುನಿಟಿಯನ್ನು ಅವರು ಕಳೆದುಕೊಂಡಿದ್ದಾರೆ. ಹಾಗಾದರೆ ಭಾರತ ತಂಡದ ಸೋಲುವುದಕ್ಕೆ ಹಲವು ಕಾರಣಗಳಿವೆ. ಹಾಗಾದರೆ ಅವುಗಳಲ್ಲಿ ಪ್ರಮುಖ ಕಾರಣಗಳು ಯಾವುವು ಎಂದು ನೋಡೋಣ.

ಬ್ಯಾಟಿಂಗ್​ ವೈಫಲ್ಯ

ಭಾರತ ತಂಡದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಗಿದೆ. ಇದುವರೆಗಿನ ಎಲ್ಲ ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಾ ಬಂದಿದ್ದ ಭಾರತ ತಂಡದ ಬ್ಯಾಟರ್​ಗಳು ಆಸೀಸ್​ ವಿರುದ್ಧ ಪತರಗುಟ್ಟಿತ್ತು. ರೋಹಿತ್ ಶರ್ಮಾ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಮಾಡಿರುವ ಹೊರತಾಗಿಯೂ ಉಳಿದವರಿಂದ ಅದೇ ಮಾದರಿಯ ಪ್ರದರ್ಶನ ಮೂಡಿ ಬರಲಿಲ್ಲ. ಪ್ರಿನ್ಸ್​ ಶುಭ್​ಮನ್​ ಗಿಲ್​ ಫೈನಲ್​ನಲ್ಲಿ ಕೇವಲ ನಾಲ್ಕು ರನ್ ಬಾರಿಸಿ ಔಟಾದರೆ, ಶ್ರೇಯಸ್ ಅಯ್ಯಸ್ ಕೂಡ ನಿರಾಸೆ ಮೂಡಿಸಿದರು. ಕೊಹ್ಲಿ ಮತ್ತು ರಾಹುಲ್ ಅರ್ಧ ಶತಕಗಳನ್ನು ಬಾರಿಸಿದರೂ ಅವರಿಂದ ಆಸೀಸ್ ಬೌಲರ್​ಗಳನ್ನು ಬೆದರಿಸಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಯಾದವ್ ಹಾಲಿ ಟೂರ್ನಿಯಲ್ಲಿ ಹಲವಾರು ಅವಕಾಶಗಳನ್ನು ಪಡೆದುಕೊಂಡಿದ್ದರು. ಆದರೆ, ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೆ ಬ್ಯಾಟ್​ ಮಾಡಲಿಲ್ಲ. ಫೈನಲ್​ನಲ್ಲಿ ಕನಿಷ್ಠ ಅರ್ಧ ಶತಕ ಬಾರಿಸಿದ್ದರೂ ಭಾರತದ ಸ್ಕೋರ್​ 280ರ ಆಸುಪಾಸು ಹೋಗುತ್ತಿತ್ತು. ಆ ವೇಳೆ ಭಾರತ ತಂಡಕ್ಕೆ ಗೆಲುವಿನ ಸಾಧ್ಯತೆಗಳು ಇದ್ದವು.

ಭಾರತ ತಂಡ ಅತ್ಯಂತ ನಿಧಾನಗತಿಯಲ್ಲಿ ಆಡಿತು ಎಂಬುದೇ ಕ್ರಿಕೆಟ್ ಅಭಿಮಾನಿಗಳ ಬೇಸರ. ಬೌಂಡರಿ , ಸಿಕ್ಸರ್​ಗಳನ್ನು ಬಾರಿಸಿ ಎದುರಾಳಿ ತಂಡದ ಬೌಲರ್​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲಗೊಂಡರು. ರಾಹುಲ್ ಮತ್ತು ಕೊಹ್ಲಿ ಇನ್ನೊಂದಿಷ್ಟು ರನ್ ಗಳಿಸಬೇಕಾಗಿತ್ತು ಎಂಬುದೇ ಎಲ್ಲರ ಅಭಿಪ್ರಾಯ.

ಟಾಸ್​ ಸೋಲು

ಭಾರತ ತಂಡ ಫೈನಲ್​ನಲ್ಲಿ ಟಾಸ್ ಸೋತಿತು. ಇಲ್ಲಿನ ಮೇಲ್ಮೈಗೆ ಪೂರಕವಾಗಿ ಚೇಸ್ ಮಾಡುವುದು ಉತ್ತಮ ಆಯ್ಕೆಯಾಗಿತ್ತು. ಆ ಅದೃಷ್ಟವನ್ನು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬಳಸಿಕೊಂಡರು. ಇನಿಂಗ್ಸ್ ಆರಂಭದಲ್ಲಿ ಭಾರತ ತಂಡದ ಆಸ್ಟ್ರೇಲಿಯಾದ ಮೂರು ವಿಕೆಟ್​ಗಳನ್ನು ಪಡೆದಿತ್ತು. ಆದರೆ, ಇಬ್ಬನಿ ಪರಿಣಾಮ ಆರಂಭಗೊಂಡ ಬಳಿಕ ಭಾರತೀಯ ಬೌಲರ್​ಗಳ ಆಟ ನಡೆಯಲಿಲ್ಲ. ಕಾಂಗರೂ ಪಡೆಯ ಟ್ರಾವಿಸ್​ ಹೆಡ್​ ಗೆಲುವಿನ ಇನಿಂಗ್ಸ್ ಬಾರಿಸಿದರು.

ಇದನ್ನೂ ಓದಿ : ‘ಕಪ್​ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ’; ಭಾರತ ತಂಡವನ್ನು ಸಂತೈಸಿದ ಮೋದಿ

ಫೀಲ್ಡೀಂಗ್​

ಭಾರತ ತಂಡ ಫೀಲ್ಡಿಂಗ್ ಕೂಡ ಫೈನಲ್​ಗೆ ಪೂರಕವಾಗಿ ಇರಲಿಲ್ಲ. ಸರಿಯಾದ ರೀತಿಯಲ್ಲಿ ಅವಕಾಶಗಳನ್ನು ಬಳಸಿಕೊಳ್ಳಲಿಲ್ಲ. ಅನಗತ್ಯ ರನ್​ಗಳನ್ನು ನೀಡುವ ಮೂಲಕ ಎದುರಾಳಿ ತಂಡಕ್ಕೆ ಅವಕಾಶಗಳನ್ನು ಸೃಷ್ಟಿ ಮಾಡಿಕೊಟ್ಟರು. ವಿಕೆಟ್​ ಕೀಪಿಂಗ್​ನಲ್ಲಿ ರಾಹುಲ್ ಹಲವಾರು ವೈಫಲ್ಯಗಳನ್ನು ಅನುಭವಿಸಿದರು. ಕ್ಯಾಚ್ ಬಿಟ್ಟಿಲ್ಲ ಎಂಬುದನ್ನು ಬಿಟ್ಟು ಫೀಲ್ಡಿಂಗ್​ನಲ್ಲಿ ಜಿದ್ದು ಇರಲಿಲ್ಲ.

ನರ್ವಸ್​?

ಭಾರತ ತಂಡದ ಆಟಗಾರರು ಮೈದಾನದಲ್ಲಿ ಫೈನಲ್ ಪಂದ್ಯದ ಒತ್ತಡಕ್ಕೆ ಬಿದ್ದಂತೆ ಕಂಡು ಬಂದರು. ಆಟಗಾರರು ಪ್ರತಿ ಬಾರಿಯೂ ಹೆದರಿಕೊಂಡೇ ಆಡುವಂತೆ ಭಾಸವಾಯಿತು. ಬ್ಯಾಟಿಂಗ್​ ವೇಳೆಯಲ್ಲಿ ಹೆದರಿಕೊಂಡು ಆಗಾಗ ವಿಕೆಟ್​ ಕಳೆದುಕೊಂಡರು . ಇದರಿಂದಾಗಿ ವಿಶ್ವಾಸದಿಂದ ಆಡಲು ಭಾರತ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ. ದೊಡ್ಡ ಮೊತ್ತವನ್ನು ಪೇರಿಸಲು ಸಾಧ್ಯವಾಗದ ಕಾರಣ ಬೌಲರ್​ಗಳಿಗೆ ಆ ಸ್ಕೋರ್ ಅನ್ನು ರಕ್ಷಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ. ಆಕ್ರಮಣಕಾರಿ ಆಟವನ್ನು ತೋರಿಸದ ಕಾರಣ ಎದುರಾಳಿ ತಂಡದ ಆಟಗಾರರು ಅದನ್ನು ಸದ್ಬಳಕೆ ಮಾಡಿಕೊಂಡರು. ಭಾರತ ತಂಡ ಕಳೆದ ಹತ್ತು ಪಂದ್ಯಗಳಲ್ಲಿ ಆಡಿದ ಆಕ್ರಮಣಶೀಲತೆಯನ್ನು ಈ ಪಂದ್ಯದಲ್ಲಿ ತೋರಿಸಿಲ್ಲ.

Exit mobile version