ಗುವಾಹಟಿ: ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಏಪ್ರಿಲ್ 8ರಂದು ಇಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಅವರು ಅಲಭ್ಯರಾಗುವ ಸಾಧ್ಯತೆಗಳಿವೆ. ಅವರ ಕೈಬೆರಳಿನ ಗಾಯಕ್ಕೆ ಹೊಲಿಗೆಗಳನ್ನು ಹಾಕಿರುವ ಕಾರಣ ಮುಂದಿನ ಪಂದ್ಯಕ್ಕೆ ಅಲಭ್ಯರಾಗಬಹುದು ಎಂದು ಅಂದಾಜಿಸಲಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಬುಧವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ದದ ಹಣಾಹಣಿಯಲ್ಲಿ ಐದು ರನ್ಗಳ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಆಡುವ ವೇಳೆ ಬಟ್ಲರ್ ಕಿರುಬೆರಳಿಗೆ ಗಾಯವಾಗಿತ್ತು. ಈ ಗಾಯ ಗುಣವಾಗಲು ಹಲವು ಸ್ಟಿಚ್ಗಳನ್ನು ಹಾಕಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಮುಂದಿನ ಪಂದ್ಯಕ್ಕೆ ಇರುವರೇ ಎಂಬ ಅನುಮಾನ ಮೂಡಿದೆ.
ಪಂಜಾಬ್ ಕಿಂಗ್ಸ್ ತಂಡದ ಬ್ಯಾಟರ್ ಶಾರುಖ್ ಖಾನ್ ಅವರು ನೀಡಿದ ಅದ್ಭುತ ಕ್ಯಾಚ್ ಹಿಡಿಯುವ ವೇಳೆ ಜೋಸ್ ಬಟ್ಲರ್ ಅವರ ಗಾಯಕ್ಕೆ ಒಳಗಾಗಿದ್ದರು. ನೋವಿಗೆ ಒಳಗಾದ ಅವರು ತಕ್ಷಣವೇ ಮೈದಾನ ತೊರೆದಿದ್ದರು. ಹೀಗಾಗಿ ಅವರು ಆರಂಭಿಕರಾಗಿ ಬ್ಯಾಟ್ ಮಾಡಲು ಬಂದಿರಲಿಲ್ಲ. ಹೀಗಾಗಿ ರವಿಚಂದ್ರನ್ ಅಶ್ವಿನ್ ಅವರಿಗೆ ಆರಂಭಿಕ ಸ್ಥಾನ ಕಲ್ಪಿಸಲಾಗಿತ್ತು.
ಜೋಸ್ ಬಟ್ಲರ್ ಮುಂದಿನ ಪಂದ್ಯಕ್ಕೆ ಫಿಟ್ ಆಗಿಲ್ಲ. ಹೀಗಾಗಿ ಅವರಿಗೆ ಆಡಲು ಸಾಧ್ಯವಾಗಿಲ್ಲ ಎಂದು ನಾಯಕ ಸಂಜು ಸ್ಯಾಮ್ಸನ್ ಪಂದ್ಯದ ಬಳಿಕ ಮಾತನಾಡುತ್ತಾ ಹೇಳಿದ್ದಾರೆ. ಅದೇ ರೀತಿ ಅವರು ಅತ್ಯುತ್ತಮ ಕ್ಯಾಚ್ ಪ್ರಶಸ್ತಿ ಪಡೆಯಲು ಬಂದಾಗಲೂ ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದರು.
ರೋಚಕ ವಿಜಯ ಸಾಧಿಸಿದ್ದ ಪಂಜಾಬ್
ಗುವಾಹಟಿ: ಅತ್ಯಂತ ರೋಚಕವಾಗಿ ನಡೆದ ಬುಧವಾರದ ಐಪಿಎಲ್ನ(IPL 2023) ಹಾವು ಏಣಿ ಆಟದಲ್ಲಿ ಕೊನೆಗೂ ಪಂಜಾಬ್ ಕಿಂಗ್ಸ್(Punjab Kings) ಕೈ ಮೇಲಾಗಿದೆ. ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ 5 ರನ್ ಅಂತರದಿಂದ ಗೆದ್ದು ಬೀಗಿದೆ. ಶಿಖರ್ ಧವನ್ ಪಡೆಗೆ ಇದು ಟೂರ್ನಿಯಲ್ಲಿ ಸತತ ಎರಡನೇ ಗೆಲುವಾಗಿದೆ.
ಗುವಾಹಟಿಯ(Guwahati) ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್(Punjab Kings) ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ಗೆ 197 ರನ್ ಗಳಿಸಿತು. ಜವಾಬಿತ್ತ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 192 ರನ್ ಗಳಿಸಲಷ್ಟೇ ಶಕ್ತವಾಯಿತು. ಕೇವಲ 5 ರನ್ ಗಳ ಅಂತರದಿಂದ ಸೋಲು ಕಂಡಿತು.
ದೊಡ್ಡ ಮೊತ್ತವನ್ನು ಗುರಿ ಬೆನ್ನಟ್ಟುವ ವೇಳೆ ಆರ್. ಅಶ್ವಿನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿ ಪ್ರಯೋಗ ನಡೆಸಿದ ರಾಜಸ್ಥಾನ್ ಕೈ ಸುಟ್ಟುಕೊಂಡಿತು. ಅಶ್ವಿನ್ ನಾಲ್ಕು ಎಸೆತ ಎದುರಿಸಿ ಶೂನ್ಯ ಸುತ್ತಿದರು. ವನ್ಡೌನ್ನಲ್ಲಿ ಕ್ರೀಸ್ಗಿಳಿದ ಜಾಸ್ ಬಟ್ಲರ್ ಕೂಡ 19 ರನ್ಗೆ ಆಟ ಮುಗಿಸಿದರು. ಇದರ ಬೆನ್ನಲ್ಲೇ ಯಶಸ್ವಿ ಜೈಸ್ವಾಲ್(11) ಕೂಡ ವಿಕೆಟ್ ಕೈಚೆಲ್ಲಿದರು. ಅರ್ಶ್ದೀಪ್ ಸಿಂಗ್ ಆರಂಭಿಕರಿಬ್ಬರ ವಿಕೆಟ್ ಕಿತ್ತರೆ ನಥಾನ್ ಎಲ್ಲಿಸಿ ಬಟ್ಲರ್ ವಿಕೆಟ್ ಉಡಾಯಿಸಿದರು. ಇಲ್ಲಿಂದ ರಾಜಸ್ಥಾನ್ ಕುಸಿತವು ಆರಂಭಗೊಂಡಿತು.
ಇದನ್ನೂ ಓದಿ : IPL 2023 : ಆರ್ಸಿಬಿಗೆ ಆಘಾತ, ತಂಡದ ಸ್ಟಾರ್ ಬ್ಯಾಟರ್ ಟೂರ್ನಿಯಿಂದ ಔಟ್
ತಂಡದ ವಿಕೆಟ್ ಉರುಳುತ್ತಿದ್ದರು ಮತ್ತೊಂದು ಬದಿಯಲ್ಲಿ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಆದರೆ ಅವರ ಆಟವೂ 42 ರನ್ಗೆ ಅಂತ್ಯ ಕಂಡಿತು. ಸಂಜು ಬಳಿಕ ತಂಡವನ್ನು ಆಧರಿಸಿದವರೆಂದರೆ ದೇವದತ್ತ ಪಡಿಕ್ಕಲ್ ಮತ್ತು ರಿಯಾನ್ ಪರಾಗ್ ಸೇರಿಕೊಂಡು ಆಕ್ರಮಣದ ಸೂಚನೆ ನೀಡಿದರೂ ಇನ್ನಿಂಗ್ಸ್ ಬೆಳೆಸಲು ವಿಫಲರಾದರು. ಪರಾಗ್ ಗಳಿಕೆ 12 ಎಸೆತಗಳಿಂದ 20 ರನ್ (2 ಸಿಕ್ಸರ್, ಒಂದು ಬೌಂಡರಿ). ಪಡಿಕ್ಕಲ್ 21 ರನ್ ಮಾಡಿದರೂ ಇದಕ್ಕೆ 26 ಎಸೆತ ತೆಗೆದುಕೊಂಡರು. ಹೊಡೆದದ್ದು ಒಂದೇ ಬೌಂಡರಿ. ಅಂತಿಮ ಹಂತದಲ್ಲಿ ಹೆಟ್ಮೈರ್(35) ಮತ್ತು ಧ್ರುವ್ ಜುರೆಲ್(ಅಜೇಯ 32) ಸಿಡಿದು ನಿಂತರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮ ಓವರ್ನಲ್ಲಿ ಗೆಲುವಿಗೆ 16 ರನ್ ತೆಗೆಯುವ ಸವಾಲಿನಲ್ಲಿ ಹೆಟ್ಮೈರ್ ರನೌಟ್ ಆದರು. ಪಂಜಾಬ್ ಪರ ಬೌಲಿಂಗ್ನಲ್ಲಿ ನಥಾನ್ ಎಲ್ಲಿಸ್ 30 ರನ್ಗೆ 4 ವಿಕೆಟ್ ಕಿತ್ತು ಮಿಂಚಿದರು. ಅರ್ಶ್ದೀಪ್ ಸಿಂಗ್ 2 ವಿಕೆಟ್ ಪಡೆದರು.
ಇದು ಗುವಾಹಟಿಯಲ್ಲಿ ನಡೆದ ಮೊದಲ ಐಪಿಎಲ್ ಪಂದ್ಯವಾಗಿದೆ. ಹೀಗಾಗಿ ಅಸ್ಸಾಂ ಕ್ರಿಕೆಟ್ ಮಂಡಳಿ ಪಂದ್ಯದ ಆರಂಭಕ್ಕೂ ಮುನ್ನ ಲೇಸರ್ ಶೋ, ಜಾನಪದ ನೃತ್ಯದೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.