Site icon Vistara News

ICC World Cup 2023 : ಆಸೀಸ್ ವಿರುದ್ಧ ಶತಕ ಬಾರಿಸಿ ಹೊಸ ದಾಖಲೆ ಬರೆದ ಆಫ್ಘನ್ ಆಟಗಾರ

Afghanistan Cricket team

ಮುಂಬಯಿ: ಎಲ್ಲ ರೀತಿಯಲ್ಲೂ 2023 ರ ವಿಶ್ವಕಪ್ (ICC World Cup 2023) ಅಫ್ಘಾನಿಸ್ತಾನ ತಂಡಕ್ಕೆ ಐತಿಹಾಸಿಕ ಎನಿಸಿಕೊಳ್ಳುತ್ತಿದೆ. ಅವರು ಈಗಾಗಲೇ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್​ ತಂಡವನ್ನು ಸೋಲಿಸಿದ್ದಾರೆ. ಈ ಮೂಲಕ ವಿಶ್ವ ಕಪ್​ ಟೂರ್ನಿಯೊಂದರಲ್ಲಿ ಗರಿಷ್ಠ ನಾಲ್ಕು ಪಂದ್ಯಗಳನ್ನು ಗೆದ್ದ ದಾಖಲೆ ಮಾಡಿದೆ. ಇದೀಗ ತಂಡದ ಬ್ಯಾಟರ್​ ಇಬ್ರಾಹಿಂ ಜದ್ರನ್ ವಿಶ್ವಕಪ್ ಇತಿಹಾಸದಲ್ಲಿಯೇ ಶತಕ ಬಾರಿಸಿದ ಮೊದಲ ಆಫ್ಘಾನ್ ಕ್ರಿಕೆಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದೂ ಬಲಿಷ್ಠ ತಂಡವಾದ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ ಅದರ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.

21 ವರ್ಷದ ಆರಂಭಿಕ ಆಟಗಾರ 131 ಎಸೆತಗಳಲ್ಲಿ ಶತಕ ಪೂರೈಸಿದ್ದರು. ನಂತರ 143 ಎಸೆತಗಳಲ್ಲಿ 121 ರನ್ ಗಳಿಸಿ ಅಜೇಯರಾಗಿ ಉಳಿದರು. ಜದ್ರಾನ್ ಇನ್ನಿಂಗ್ಸ್ ಉತ್ತಮವಾಗಿ ಆರಂಭಗೊಂಡರೂ ಅವರ ಆರಂಭಿಕ ಜತೆಗಾರ ರಹ್ಮನುಲ್ಲಾ ಗುರ್ಬಜ್ ಔಟ್​ ಆದರು. ಮಧ್ಯಮ ಕ್ರಮಾಂಕದಲ್ಲಿ ರಹಮತ್ ಶಾ ಅವರಿಂದ ನೆರವು ಪಡೆದ ಜದ್ರಾನ್​ ಎರಡನೇ ವಿಕೆಟ್​​ಗೆ 83 ರನ್​ಗಳ ಜೊತೆಯಾಟ ನೀಡಿದರು. ಅಲ್ಲದೆ, ಮಧ್ಯಮ ಹಂತದಲ್ಲಿ ಆಡಮ್ ಜಂಪಾ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅವರಂತಹ ಆಸ್ಟ್ರೇಲಿಯಾ ಸ್ಪಿನ್​ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು.

ಬಲಗೈ ಆರಂಭಿಕ ಬ್ಯಾಟರ್ ಜದ್ರಾನ್​, ನಾಯಕ ​ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜೈ ಅವರೊಂದಿಗೆ ಇನಿಂಗ್ಸ್​ ಮುಂದುವರಿಸಿದರು. ನಂತರ ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ಅವರ ನಿರ್ಣಾಯಕ ಹೊಡೆತಗಳ ಮೂಲಕ ತಂಡಕ್ಕೆ 292 ರನ್ ಪೇರಿಸಲು ನೆರವಾದರು.

ಆಫ್ಘನ್ ತಂಡಕ್ಕೆ ಹೊಸ ಮಾನದಂಡ

ಕೌಶಲ ಮತ್ತು ಆಕ್ರಮಣಕಾರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಜದ್ರಾನ್ ಅವರ ಇನ್ನಿಂಗ್ಸ್​​ನಲ್ಲಿ ಅವರು 143 ಎಸೆತಗಳಲ್ಲಿ 8 ಬೌಂಡರಿಗಳು ಮತ್ತು 3 ಸಿಕ್ಸರ್​​ ಸೇರಿದಂತೆ 129 ರನ್ ಗಳಿಸಿದರು. 2015ರ ವಿಶ್ವಕಪ್​ನಲ್ಲಿ ಸ್ಕಾ ಟ್ಲೆಂಡ್ ವಿರುದ್ಧ ಸಮೀವುಲ್ಲಾ ಶಿನ್ವಾರಿ 96 ರನ್ ಹಾಗೂ ಪಾಕಿಸ್ತಾನ ವಿರುದ್ಧ ಜದ್ರಾನ್ 87 ರನ್ ಬಾರಿಸಿದ್ದು ಇದುವರೆಗಿನ ಗರಿಷ್ಠ ರನ್​ಗಳಾಗಿದ್ದವು.

ಈ ಸುದ್ದಿಯನ್ನೂ ಓದಿ : Hardik Pandya : ಹಾರ್ದಿಕ್ ಪಾಂಡ್ಯ ಫಿಟ್ನೆಸ್​ ಬಗ್ಗೆ ಸಿಕ್ಕಿತು ಹೊಸ ಅಪ್ಡೇಟ್​​

2019 ರ ವಿಶ್ವಕಪ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಕ್ರಮ್ ಅಲಿಖಿಲ್ ಅವರ 86 ರನ್ ಮತ್ತು ಹಾಲಿ ವಿಶ್ವಕಪ್​​ನಲ್ಲಿ ಇಂಗ್ಲೆಂಡ್ ವಿರುದ್ಧ ರಹಮಾನುಲ್ಲಾ ಗುರ್ಬಾಜ್ ಅವರ 80 ರನ್ ಗಳಿಸಿದ್ದರು. ಆ ಎಲ್ಲ ದಾಖಲೆಯನ್ನು ಮೀರಿದ್ದಾರೆ ಇಬ್ರಾಹಿಂ.

ಅಫಘಾನಿಸ್ತಾನ ತಂಡಕ್ಕೆ ಮಹತ್ವದ ಕ್ಷಣ

ಈ ಮೈಲಿಗಲ್ಲು ಇಬ್ರಾಹಿಂ ಜದ್ರಾನ್ ಅವರಿಗೆ ವೈಯಕ್ತಿಕ ಸಾಧನೆ ಮಾತ್ರವಲ್ಲ, ಅಫ್ಘಾನಿಸ್ತಾನ ಕ್ರಿಕೆಟ್​ಗೆ ಮಹತ್ವದ ಕ್ಷಣವಾಗಿದೆ. ಇದು ಜಾಗತಿಕ ವೇದಿಕೆಯಲ್ಲಿ ಆ ತಂಡದ ಆಟಗಾರರು ಬೆಳೆಯುತ್ತಿರುವ ವೇಗವನ್ನು ಪ್ರದರ್ಶಿಸುತ್ತದೆ. ಅವರು ತಂಡಕ್ಕೆ ಪ್ರಮುಖ ಆಟಗಾರ ಎನಿಸಿಕೊಳ್ಳಲಿದ್ದಾರೆ. ಜದ್ರಾನ್ ವಯಸ್ಸು 21 ವರ್ಷ 330 ದಿನಗಳು. ಹೀಗಾಗಿ ಅವರು ವಿಶ್ವಕಪ್ ಇತಿಹಾಸದಲ್ಲಿ ಶತಕ ಗಳಿಸಿದ ನಾಲ್ಕನೇ ಕಿರಿಯ ಆಟಗಾರರಾಗಿದ್ದಾರೆ.

ಈ ಪಟ್ಟಿಯಲ್ಲಿ 20 ವರ್ಷ 196 ದಿನಗಳ ವಯಸ್ಸಿನ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹೊಂದಿರುವ ಪಾಲ್ ಸ್ಟಿರ್ಲಿಂಗ್, ರಿಕಿ ಪಾಂಟಿಂಗ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಆಟಗಾರರು ಸೇರಿದ್ದಾರೆ.

ಜದ್ರಾನ್ ಅವರ ಅಸಾಧಾರಣ ಶತಕದ ನೆರವಿನಿಂದ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಜದ್ರಾನ್ ಅವರ ಐತಿಹಾಸಿಕ ಶತಕದಿಂದ ದಾಖಲಾದ ಪ್ರಭಾವಶಾಲಿ ಮೊತ್ತವು ಅಫ್ಘಾನಿಸ್ತಾನವನ್ನು ಸೆಮಿಫೈನಲ್ ಸ್ಥಾನದ ರೇಸ್​ನಲ್ಲಿ ಬಲವಾಗಿ ಇರಿಸಿದೆ.

Exit mobile version