ನಾಗ್ಪುರ: ದಿನೇಶ್ ಕಾರ್ತಿಕ್ ಬ್ಯಾಟ್ ಮಾಡಲು ಬರುವಾಗ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಪಂದ್ಯ ಗೆಲ್ಲುವ ವಿಶ್ವಾಸ ಮೂಡಿತ್ತು. ಅವರೂ ಹೆಚ್ಚು ಹೊತ್ತು ಕಾಯಲಿಲ್ಲ. ಬಂದವರೇ ಒಂದು ಸಿಕ್ಸರ್, ಒಂದು ಫೋರ್ ಬಾರಿಸಿದರು. ೨ ಎಸೆತಗಳಲ್ಲಿ ಅವರು ಬಾರಿಸಿದ ರನ್ ೧೦. ಅಲ್ಲಿಗೆ ಭಾರತ ತಂಡಕ್ಕೆ ೬ ವಿಕೆಟ್‌ಗಳ ಭರ್ಜರಿ ಜಯ ಲಭಿಸಿತು. ಇದು ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆ ಶುಕ್ರವಾರ ರಾತ್ರಿ ನಾಗ್ಪುರ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದ ಕೊನೇ ಕ್ಷಣದ ಚಿತ್ರಣ. ಹಾಗೆಂದು ಕಾರ್ತಿಕ್ ಈ ಪಂದ್ಯದ ಹೀರೊ ಅಲ್ಲ. ಅವರು ಜಸ್ಟ್ ಫಿನಿಶರ್. ಸೂಪರ್ ಹೀರೊ ನಾಯಕ ರೋಹಿತ್ ಶರ್ಮ.
ಮಳೆಯಿಂದಾಗಿ ೮ ಓವರ್‌ಗಳಿಗೆ ಸೀಮಿತಗೊಂಡಿದ್ದ ಭಾರತ ತಂಡಕ್ಕೆ ೯೧ ರನ್ ಬಾರಿಸಿ ಗೆಲ್ಲುವ ಗುರಿಯನ್ನು ಒಡ್ಡಿತ್ತು ಎದುರಾಳಿ ಆಸೀಸ್ ಬಳಗ. ಆದರೆ, ನಾಯಕ ರೋಹಿತ್ ಶರ್ಮ ಅದಕ್ಕೆ ಕ್ಯಾರೇ ಎನ್ನಲಿಲ್ಲ. ೨೦ ಎಸೆತಗಳಲ್ಲಿ ೪ ಸಿಕ್ಸರ್ ಹಾಗೂ ಅಷ್ಟೇ ಸಂಖ್ಯೆಯ ಫೋರ್ ಬಾರಿಸಿ ಏಕಾಂಕಿ ಹೋರಾಟ ನಡೆಸಿದರು. ಕೆ. ಎಲ್ ರಾಹುಲ್ (೧೦), ವಿರಾಟ್ ಕೊಹ್ಲಿ (೧೧), ಸೂರ್ಯಕುಮಾರ್ ಯಾದವ್ (೧೧), ಹಾರ್ದಿಕ್ ಪಾಂಡ್ಯ (೯) ತಂಡದ ನೆರವಿಗೆ ನಿಲ್ಲಲಿಲ್ಲ. ಆದರೆ, ರೋಹಿತ್ ನಾಯಕನ ಜವಾಬ್ದಾರಿ ಮೆರೆದರು. ಕೊನೇ ತನಕ ನಿಂತು ತಂಡಕ್ಕೆ ಆರು ವಿಕೆಟ್‌ಗಳ ಜಯ ತಂದುಕೊಟ್ಟರು.
ಈ ಗೆಲುವಿನಿಂದ ಭಾರತ ತಂಡದ ಮರ್ಯಾದೆ ಉಳಿಯಿತು. ಸರಣಿ೧-೧ ಸಮಬಲದ ಸಾಧನೆ ಮಾಡಿದೆ. ಹೈದರಾಬಾದ್‌ನಲ್ಲಿ ೩ನೇ ಹಾಗೂ ಕೊನೇ ಪಂದ್ಯ ನಡೆಯಲಿದೆ. ಅಲ್ಲಿಯೂ ಭಾರತ ಜಯಿಸಲೇಬೇಕು.
ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಭಿಸಿತು ಜಯ
ಈ ಪಂದ್ಯ ಭಾರತ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಹಣಾಹಣಿಯಾಗಿತ್ತು. ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದ ತಂಡಕ್ಕೆ ಅರಂಭದಲ್ಲಿ ನಿರಾಸೆ ಉಂಟು ಮಾಡಿದ್ದು ಮಳೆರಾಯ. ದಿನವಿಡೀ ಸುರಿದ ಮಳೆಯಿಂದಾಗಿ ಮೈದಾನ ಪೂರ್ತಿ ತೇವಗೊಂಡಿತ್ತು. ಹೀಗಾಗಿ ಪಂದ್ಯ ಆರಂಭಕ್ಕೆ ಅಡಚಣೆ ಉಂಟಾಗಿ ೨.೧೫ ನಿಮಿಷ ತಡವಾಯಿತಲ್ಲದೆ, ೮ ಓವರ್‌ಗಳಿಗೆ ಸೀಮಿತೊಳಿಸಲಾಯಿತು. ಅಂತೆಯೇ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿ, ಚೇಸ್ ಮಾಡಿ ಜಯಿಸುವುದೇ ನಾಯಕ ರೋಹಿತ್ ಶರ್ಮ ಅವರ ಯೋಜನೆಯಾಗಿತ್ತು. ಆದರೆ, ಯೋಜನೆ ಸಂಪೂರ್ಣ ನೆರವಿಗೆ ಬರಲಿಲ್ಲ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‌ಗಳು ಮುಕ್ತಾಯಗೊಂಡಾಗ ೫ ವಿಕೆಟ್ ಕಳೆದುಕೊಂಡು ೯೦ ರನ್ ಬಾರಿಸಿತು. ಪ್ರವಾಸಿ ತಂಡವೂ ಆರೋನ್ ಫಿಂಚ್ (೩೧ ರನ್, ೧೫ ಎಸೆತ, ೪ ಫೋರ್, ೧ ಸಿಕ್ಸರ್), ಮ್ಯಾಥ್ಯೂ ವೇಡ್ (೪೩ ರನ್, ೨೦ ಎಸೆತ, ೪ ಫೋರ್, ೩ ಸಿಕ್ಸರ್) ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೇವಲ ೪೮ ಎಸೆತಗಳಲ್ಲಿ ೯೦ ರನ್ ಪೇರಿಸಿತು. ಹೀಗಾಗಿ ಭಾರತ ತಂಡಕ್ಕೆ ದೊಡ್ಡ ಮೊತ್ತದ ಸವಾಲು ಎದುರಾಯಿತು. ಅದರೆ, ಭಾರತವೂ ಕೈ ಚೆಲ್ಲಲಿಲ್ಲ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವು ಸಾಧಿಸಿತು.
ಬೌಲಿಂಗ್ ಸುಧಾರಣೆ ಅಗತ್ಯವಿದೆ
೮ ಓವರ್‌ಗಳ ಚುಟುಕು ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ಪ್ರಭಾವ ಶಾಲಿಯಾಗಿರಲಿಲ್ಲ. ಅದರಲ್ಲೂ ಹರ್ಷಲ್ ಪಟೇಲ್ ೨ ಓವರ್‌ಗಳ ಸ್ಪೆಲ್‌ನಲ್ಲಿ ೩೨ ರನ್ ಬಿಟ್ಟುಕೊಟ್ಟರು. ಬುಮ್ರಾ ತಂಡಕ್ಕೆ ಪ್ರವೇಶ ಪಡೆದುಕೊಂಡು ಭರ್ಜರಿ ಯಾರ್ಕರ್ ಮೂಲಕ ಆರೋನ್ ಫಿಂಚ್‌ಗೆ ಪೆವಿಲಿಯನ್ ಹಾದಿ ತೋರಿದರೂ, ೨ ಓವರ್‌ಗಳಲ್ಲಿ ೨೩ ರನ್ ಬಿಟ್ಟುಕೊಟ್ಟರು. ಯಜ್ವೇಂದ್ರ ಚಹಲ್‌ಗೂ (೧ ಓವರ್ ೧೨ ರನ್) ಎದುರಾಳಿ ತಂಡವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಹಾರ್ದಿಕ್ ಪಾಂಡ್ಯ ೧ ಓವರ್‌ಗಳಲ್ಲಿ ೧೦ ರನ್ ಬಿಟ್ಟುಕೊಟ್ಟರು. ಆದರೆ, ಅಕ್ಷರ್ ಪಟೇಲ್ ಮತ್ತೆ ಮಿಂಚಿದರು. ೧೩ ರನ್ ಬಿಟ್ಟುಕೊಟ್ಟು ೨ ವಿಕೆಟ್ ಕಬಳಿಸಿದರು. ಒಟ್ಟಿನಲ್ಲಿ ವಿಶ್ವ ಕಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡ ಬೌಲಿಂಗ್ ಇನ್ನಷ್ಟು ಬಲವಾಗಬೇಕಾಗಿದೆ ಎಂಬ ಸೂಚನೆ ಈ ಪಂದ್ಯದಲ್ಲಿ ಲಭಿಸಿದೆ.
ಬ್ಯಾಟರ್‌ಗಳ ಶ್ರಮವೂ ಹೆಚ್ಚಾಗಬೇಕು
ಮಳೆಯಿಂದಾಗಿ ಪಿಚ್ ತೇವಗೊಂಡಿತ್ತು. ಹೀಗಾಗಿ ಚೆಂಡು ನಿರೀಕ್ಷಿತ ಮಟ್ಟದಲ್ಲಿ ಪುಟಿದೇಳುತ್ತಿರಲಿಲ್ಲ. ಇದರ ಲಾಭವನ್ನು ಅಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆಡಂ ಜಂಪಾ ಸರಿಯಾಗಿ ಬಳಸಿಕೊಂಡರು. ೨ ಓವರ್‌ಗಳಲ್ಲಿ ೧೬ ರನ್‌ಗಳಿಗೆ ೩ ವಿಕೆಟ್ ಕಬಳಿಸಿದರು. ಕೆ. ಎಲ್ ರಾಹುಲ್, ವಿರಾಟ್ ಕೊಹ್ಲಿ ಬೇಗ ವಿಕೆಟ್ ಒಪ್ಪಿಸುವ ಚಾಳಿ ಬಿಡಬೇಕು. ಅದರಲ್ಲೂ ಸೂರ್ಯಕುಮಾರ್ ಯಾದವ್ ಶೂನ್ಯ ಸುತ್ತಿರುವುದು ದುಬಾರಿಯಾಯಿತು. ಅವರು ಇನ್ನಷ್ಟು ಜವಾಬ್ದಾರಿಯಿಂದ ಆಡಬೇಕಾಗಿದೆ. ಹಾರ್ದಿಕ್ ಪಾಂಡ್ಯ ಅವರ ಪ್ರಯತ್ನ ಕೈಗೂಡಲಿಲ್ಲ. ಬ್ಯಾಟರ್‌ಗಳು ಸಮಯೋಚಿತ ಪ್ರದರ್ಶನ ನೀಡುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ.
ಇದನ್ನೂ ಓದಿ | IND vs AUS | ರೋಹಿತ್ ಶರ್ಮ ಅಬ್ಬರ; ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡಕ್ಕೆ 6 ವಿಕೆಟ್ ಜಯ