ರಾಂಚಿ : ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvs IND T20) ಮೊದಲ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 177 ರನ್ಗಳ ಸವಾಲು ಎದುರಾಗಿದೆ. ಇಲ್ಲಿನ ಜೆಎಸ್ಸಿಎ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಆರಂಭಿಕ ಬ್ಯಾಟರ್ ಡೆವೋನ್ ಕಾನ್ವೆ (52) ಹಾಗೂ ಡ್ಯಾರಿಲ್ ಮಿಚೆಲ್ (59) ಅರ್ಧ ಶತಕಗಳ ನೆರವಿನಿಂದ 176 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಟಾಸ್ ಗೆದ್ದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಬ್ಯಾಟಿಂಗ್ ಆರಂಭಿಸಿದ ಪ್ರವಾಸಿ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಬಾರಿಸಿತು. ಆರಂಭದಲ್ಲಿ ಭಾರತ ತಂಡ ಬೌಲಿಂಗ್ನಲ್ಲಿ ನಿಯಂತ್ರಣ ಸಾಧಿಸಿದರೂ ಕೊನೇ ಹಂತದಲ್ಲಿ ರನ್ ಬಿಟ್ಟುಕೊಟ್ಟಿತು.
ಇನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ಬಳಗ ಮೊದಲ ವಿಕೆಟ್ಗೆ 43 ರನ್ ಪೇರಿಸಿತು. ಫಿನ್ ಅಲೆನ್ (35), ಬಾರಿಸಿ ಔಟಾದರೆ ಡೆವೋನ್ ಕಾನ್ವೆ ಅರ್ಧ ಶತಕ ಬಾರಿಸಿದರು. ಮಾರ್ಕ್ ಚಾಪ್ಮನ್ ಶೂನ್ಯಕ್ಕೆ ಔಟಾದರು. ಗ್ಲೆನ್ ಫಿಲಿಪ್ಸ್ ಕೂಡ ಹೆಚ್ಚು ಹೊತ್ತು ಆಡಲಿಲ್ಲ. ಆದರೆ ಡ್ಯಾರಿಲ್ ಮಿಚೆಲ್ ಭಾರತ ಬೌಲರ್ಗಳಿಗೆ ಸಡ್ಡು ಹೊಡೆದರು.
ಭಾರತ ಪರ ವಾಷಿಂಗ್ಟನ್ ಸುಂದರ್ 22 ರನ್ಗಳಿಗೆ ಎರಡು ವಿಕೆಟ್ ಪಡೆದು ಮಿಂಚಿದರು. ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್ ಹಾಗೂ ಶಿವಂ ಮಾವಿ ತಲಾ ಒಂದು ವಿಕೆಟ್ ಪಡೆದರು.