ಚಿತ್ತಗಾಂಗ್ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ (INDvsBAN) ಮೊದಲ ಪಂದ್ಯದಲ್ಲಿ ಭಾರತ ತಂಡ ಬಿಗಿ ಹಿಡಿತ ಸಾಧಿಸಿದೆ. ಮೊದಲ ಇನಿಂಗ್ಸ್ನಲ್ಲಿ 404 ರನ್ಗಳನ್ನು ಬಾರಿಸಿದ ಟೀಮ್ ಇಂಡಿಯಾ ಬಳಗ ಮಾರಕ ಬೌಲಿಂಗ್ ದಾಳಿ ಸಂಘಟಿಸಿ 133 ರನ್ಗಳಿಗೆ ಬಾಂಗ್ಲಾದೇಶ ತಂಡದ 8 ವಿಕೆಟ್ ಕಬಳಿಸಿದೆ. ಎರಡನೇ ದಿನದಾಟದಂತ್ಯಕ್ಕೆ ಭಾರತ 271 ರನ್ ಮುನ್ನಡೆ ಪಡೆದುಕೊಂಡಿದೆ.
ಗುರುವಾರ 6 ವಿಕೆಟ್ ನಷ್ಟಕ್ಕೆ 278 ರನ್ಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ತಂಡ, ಬಳಿಕ ಅದಕ್ಕೆ 106 ರನ್ಗಳನ್ನು ಸೇರ್ಪಡೆ ಮಾಡಿತು. ಆರ್ ಅಶ್ವಿನ್ (58) ಅರ್ಧ ಶತಕ ಬಾರಿಸಿದರೆ ಕುಲ್ದೀಪ್ ಯಾದವ್ (40) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಭಾರತದ ಒಟ್ಟು ಮೊತ್ತ ಹಿಗ್ಗುವಂತೆ ನೋಡಿಕೊಂಡರು. ಉಮೇಶ್ ಯಾದವ್ 10 ಎಸೆತಗಳಲ್ಲಿ 15 ರನ್ ಬಾರಿಸಿದರು.
ಮೊದಲ ದಿನದಾಟದಲ್ಲಿ 82 ರನ್ ಬಾರಿಸಿ ಭಾರತ ತಂಡಕ್ಕೆ ಆಧಾರವಾಗಿದ್ದ ಶ್ರೇಯಸ್ ಅಯ್ಯರ್, ಎರಡನೇ ದಿನ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಹಿಂದಿನ ದಿನದ ಮೊತ್ತಕ್ಕೆ 4 ರನ್ ಸೇರಿಸಿ ಎಬಾದತ್ ಹೊಸೈನ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಜತೆಯಾದ ಅಶ್ವಿನ್ ಹಾಗೂ ಕುಲ್ದೀಪ್ ಯಾದವ್ ಏಳನೇ ವಿಕೆಟ್ಗೆ 92 ರನ್ಗಳ ಜತೆಯಾಟ ಕೊಟ್ಟರು. ಇವರಿಬ್ಬರು ಬಾಂಗ್ಲಾದ ಬೌಲರ್ಗಳಿಗೆ ಸತಾಯಿಸಿದರು. ಇವರಿಬ್ಬರ ಆಟದ ನೆರವಿನಿಂದ ಭಾರತ ತಂಡ 133.5 ಓವರ್ಗಳಲ್ಲಿ 404 ರನ್ ಬಾರಿಸಿತು.
ಬೌಲಿಂಗ್ನಲ್ಲೂ ಮಿಂಚಿದ ಕುಲ್ದೀಪ್
ಮೊದಲ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ಭಾರತ ಬೌಲರ್ಗಳು ಕಾಡಿದರು. ಬ್ಯಾಟಿಂಗ್ನಲ್ಲಿ 40 ರನ್ ಬಾರಿಸಿ ನೆರವಾಗಿದ್ದ ಕುಲ್ದೀಪ್ ಯಾದವ್ ಬೌಲಿಂಗ್ನಲ್ಲೂ ಮೊನಚಿನ ದಾಳಿ ನಡೆಸಿದರು. ಬಾಂಗ್ಲಾದೇಶದ ಪ್ರಮುಖ ಬ್ಯಾಟರ್ಗಳನ್ನು ಔಟ್ ಮಾಡಿದ ಅವರು 33 ರನ್ಗಳಿಗೆ ನಾಲ್ಕು ವಿಕೆಟ್ ಕಬಳಿಸಿದರು. ವೇಗಿ ಮೊಹಮ್ಮದ್ ಸಿರಾಜ್ ಕೂಡ 14 ರನ್ಗಳಿಗೆ 3 ವಿಕೆಟ್ ಕಿತ್ತು ಭಾರತದ ಮುನ್ನಡೆಗೆ ನೆರವಾದರು.
ಬಾಂಗ್ಲಾದೇಶದ ಅರಂಭಿಕರಾದ ನಜ್ಮುಲ್ ಹೊಸೈನ್ ಶೂನ್ಯಕ್ಕೆ ಔಟಾದರೆ ಜಾಕಿರ್ ಹಸನ್ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಇವರಿಬ್ಬರ ವಿಕೆಟ್ ಸಿರಾಜ್ ಪಾಲಾಯಿತು. ಲಿಟನ್ ದಾಸ್ (24) ಕೂಡ ಸಿರಾಜ್ ವೇಗಕ್ಕೆ ಬೌಲ್ಡ್ ಆದರು. ಮುಷ್ಪಿಕರ್ ರಹೀಮ್ (28) ಬಾಂಗ್ಲಾದೇಶ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ. ಮೆಹೆದಿ ಹಸನ್ (16) ಹಾಗೂ ಎಬಾದತ್ ಹೊಸೈನ್ (13) ಮೂರನೇ ದಿನಕ್ಕೆ ವಿಕೆಟ್ ಕಾಪಾಡಿಕೊಂಡಿದ್ದಾರೆ.
ಸ್ಕೋರ್ ವಿವರ
ಭಾರತ : ಮೊದಲ ಇನಿಂಗ್ಸ್ 404 (ಬುಧವಾರ 278ಕ್ಕೆ 6 ವಿಕೆಟ್) (ಶ್ರೇಯಸ್ ಅಯ್ಯರ್ 86, ರವಿಚಂದ್ರನ್ ಅಶ್ವಿನ್ 58, ಕುಲ್ದೀಪ್ ಯಾದವ್ 40; ತೈಜುಲ್ ಇಸ್ಲಾಮ್ 113ಕ್ಕೆ4 ವಿಕೆಟ್, ಮೆಹೆದಿ ಹಸನ್ 112ಕ್ಕೆ 4 ವಿಕೆಟ್).
ಬಾಂಗ್ಲಾದೇಶ : ಮೊದಲ ಇನಿಂಗ್ಸ್ 8 ವಿಕೆಟ್ಗೆ 133 (ಮುಷ್ಫಿಕರ್ ರಹೀಮ್ 28, ಲಿಟನ್ ದಾಸ್ 24; ಮೊಹಮ್ಮದ್ ಸಿರಾಜ್ 14ಕ್ಕೆ3; ಕುಲ್ದೀಪ್ ಯಾದವ್ 33ಕ್ಕೆ4).
ಇದನ್ನೂ ಓದಿ | INDvsBAN | ಆಕ್ರಮಣಕಾರಿ ಆಟ ಆಡುತ್ತೇವೆ; ಬಾಂಗ್ಲಾಗೆ ಎಚ್ಚರಿಕೆ ಕೊಟ್ಟ ನಾಯಕ ರಾಹುಲ್