Site icon Vistara News

Kabaddi Players | ಟಾಯ್ಲೆಟ್‌ನಲ್ಲಿ ಕಬಡ್ಡಿ ಆಟಗಾರರಿಗೆ ಫುಡ್ ಸರ್ವ್! ಯುಪಿ ಸರ್ಕಾರದ ವಿರುದ್ಧ ಆಕ್ರೋಶ

Kabaddi Players

ಸಹಾರನಪುರ: ಉತ್ತರ ಪ್ರದೇಶದಲ್ಲಿ ಕಬಡ್ಡಿ ಆಟಗಾರ(Kabaddi Players)ರಿಗೆ ಟಾಯ್ಲೆಟ್‌ನಲ್ಲಿ ಆಹಾರ ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿವೆ. ಸಹಾರನಪುರದಲ್ಲಿ ಗರ್ಲ್ಸ್ ಅಂಡರ್ 17 ಸ್ಟೇಟ್ ಲೇವಲ್ ಕಬಡ್ಡಿ ಟೂರ್ನಾಮೆಂಟ್ ಆಯೋಜಿಸಲಾಗಿತ್ತು. ಈ ವೇಳೆ ಟಾಯ್ಲೆಟ್‌‌ನಲ್ಲಿ ಕ್ರೀಡಾಪಟುಗಳಿಗೆ ಆಹಾರ ವಿತರಿಸುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟಾಯ್ಲೆಟ್‌ನ ಮೂತ್ರಿಗಳ ಪಕ್ಕದಲ್ಲೇ ಇಡಲಾಗಿರುವ ಅನ್ನ ಮತ್ತು ಪಲ್ಯವನ್ನು ಬಾಲಕಿಯರು ಸ್ವಯಂ ಸರ್ವ್ ಮಾಡಿಕೊಳ್ಳುವ ದೃಶ್ಯಗಳು ಈ ವಿಡಿಯೋದಲ್ಲಿವೆ. ಪೇಪರ್ ಮೇಲೆ ಕೆಲವು ಪೂರಿಗಳು ಇರುವುದನ್ನೂ ವಿಡಿಯೋದಲ್ಲಿ ನೋಡಬಹುದು. ಒಂದು ನಿಮಿಷದ ಈ ವಿಡಿಯೋ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕಿರಿಯ ಕಬಡ್ಡಿ ಆಟಗಾರರನ್ನು ನಡೆಸಿಕೊಂಡಿರುವ ರೀತಿಗೆ ಕಾಂಗ್ರೆಸ್, ರಾಷ್ಟ್ರೀಯ ಲೋಕದಳ ಸೇರಿದಂತೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಕ್ರೀಡಾಧಿಕಾರಿ ಸಸ್ಪೆಂಡ್
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರವು ಸಹಾರನಪುರ ಸ್ಪೋರ್ಟ್ಸ್ ಆಫೀಸರ್ ಅನಿಮೇಶ್ ಸಕ್ಸೆನಾ ಅವರನ್ನು ಸಸ್ಪೆಂಡ್ ಮಾಡಿದೆ. ಜಾಗದ ಕೊರತೆಯಿಂದಾಗಿ ಆಹಾರವನ್ನು ಚೇಂಜಿಂಗ್ ರೂಮ್(ಟಾಯ್ಲೆಟ್)ನಲ್ಲಿ ಇಡಲಾಗಿತ್ತು ಎಂದು ಸಸ್ಪೆಂಡ್ ಆಗಿರುವ ಅಧಿಕಾರಿ ಅನಿಮೇಶ್ ಸಕ್ಸೆನಾ ಅವರು ತಿಳಿಸಿದ್ದಾರೆ.

ಕ್ರೀಟಾಕೂಟದ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದ್ದೇನೆ ಎಂದು ಸಹಾರನಪುರ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಜಾಹೀರಾತಿಗಾಗಿ ಬಿಜೆಪಿಯು ಕೋಟ್ಯಂತರ ರೂಪಾಯಿ ವೆಚ್ಚ ಮಾಡಬಹುದು. ಆದರೆ, ಆಟಗಾರರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ಈ ಸರ್ಕಾರದ ಬಳಿ ಹಣವಿಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ಇದೇ ರೀತಿ ಉಳಿದ ಪಕ್ಷಗಳು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿವೆ.

ಇದನ್ನೂ ಓದಿ | Kabaddi Fight | ಕಬಡ್ಡಿ ಫೈನಲ್‌ ಪಂದ್ಯದಲ್ಲಿ ತೀರ್ಪಿಗೆ ಚಕಾರ; ಎರಡು ಗುಂಪುಗಳ ಮಾರಾಮಾರಿ!

Exit mobile version