ಲುಸೈಲ್ (ಕತಾರ್): ಫುಟ್ಬಾಲ್ ಪ್ರೇಮಿಗಳನ್ನು ತುದಿಗಾಗಲ್ಲಿ ನಿಲ್ಲಿಸಿದ ಶುಕ್ರವಾರದ ಫಿಫಾ ವಿಶ್ವ ಕಪ್ನ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳು ಪೆನಾಲ್ಟಿ ಶೂಟೌಟ್ ಮೂಲಕ ಗೆಲುವು ದಾಖಲಿಸಿತು. ಮೊದಲ ಪಂದ್ಯದಲ್ಲಿ ಬಲಿಷ್ಠ ಬ್ರೆಜಿಲ್ ತಂಡದ ವಿರುದ್ಧ ಕ್ರೊವೇಶಿಯ ಗೆಲುವು ಸಾಧಿಸಿದರೆ ಬಳಿಕದ ಪಂದ್ಯದಲ್ಲಿ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡ ನೆದರ್ಲೆಂಡ್ಸ್ ವಿರುದ್ಧ ಗೆದ್ದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತು.
ಲೂಸೈಲ್ ಸ್ಟೇಡಿಯಂನಲ್ಲಿ ಶುಕ್ರವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‍ನಲ್ಲಿ 4-3 ಗೋಲ್ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಅರ್ಜೆಂಟೀನಾ ಹಾಗೂ ಲಿಯೊನೆಲ್ ಮೆಸ್ಸಿ ವಿಶ್ವ ಕಪ್ ಕನಸು ಜೀವಂತವಾಗಿ ಉಳಿದಿದೆ.
ಪಂದ್ಯದ ಬಹುತೇಕ ಸಮಯದ ವರೆಗೆ ಅರ್ಜೆಂಟೀನಾ 2-0 ಗೋಲುಗಳಿಂದ ಮುಂದಿತ್ತು ಹಾಗೂ ಸೆಮಿಫೈನಲ್‍ಗೆ ಸುಲಭವಾಗಿ ಪ್ರವೇಶ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ನೆದರ್ಲೆಂಡ್ಸ್ನ ಬದಲಿ ಆಟಗಾರ ವೂಟ್ ವೆಗೋಸ್ಟ್ ಮತ್ತು ಬರ್ಗ್ವಿಜ್ ಕೊನೆಕ್ಷಣದಲ್ಲಿ ಗೋಲು ಬಾರಿಸುವ ಮೂಲಕ ಪಂದ್ಯವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಂತೆ ಮಾಡಿದರು. 30 ನಿಮಿಷಗಳ ಹೆಚ್ಚಿನ ಅವಧಿಯ ಬಳಿಕವೂ 2-2 ಸಮಬಲ ಮುಂದುವರಿಯಿತು. ಇದರಿಂದಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.
ಅಂತಿಮವಾಗಿ ಪೆನಾಲ್ಟಿ ಶೂಟೌಟ್‍ನಲ್ಲಿ ಅರ್ಜೆಂಟೀನಾ 4-3 ಅಂತರದಿಂದ ಗೆಲುವು ಸಾಧಿಸಿತು. ಮುಂದಿನ ಸೆಮಿಫೈನಲ್ ಕಾದಾಟದಲ್ಲಿ ಮೆಸ್ಸಿ ಪಡೆ ಕಳೆದ ಬಾರಿಯ ರನ್ನರ್ ಅಪ್ ಕ್ರೊವೇಶಿಯ ವಿರುದ್ಧ ಬುಧವಾರ ಸೆಣಸಲಿದೆ.
ಇದನ್ನೂ ಓದಿ | FIFA World Cup | ಬ್ರೆಜಿಲ್‌ಗೆ ಆಘಾತ ನೀಡಿದ ಕ್ರೊಯೇಷ್ಯಾ; ಸೆಮಿಫೈನಲ್ಸ್‌ಗೆ ಪ್ರವೇಶ