ಬೆಂಗಳೂರು: ಮಾಜಿ ಪತ್ನಿ ಹಾಗೂ ಇನ್ನೂ ಹಲವರ ಮೇಲೆ ಹಲ್ಲೆ, ದೈಹಿಕ ಕಿರುಕುಳ ಹಾಗೂ ಹಿಂಬಾಲಿಸಿ ಬೆದರಿಸಿರುವುದ ಸೇರಿದಂತೆ ಒಟ್ಟು 19 ಕೇಸ್ಗಳನ್ನು ಹಾಕಿಸಿಕೊಂಡಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ (Michael Slater) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಟ್ರೇಲಿಯಾದ ಈ ಮಾಜಿ ಟೆಸ್ಟ್ ಕ್ರಿಕೆಟಿಗನ ಪ್ರಕರಣವನ್ನು ಏಪ್ರಿಲ್ 15 ರ ಸೋಮವಾರ ಮರೂಚಿಡೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ತರಲಾಗಿದೆ. ಈ ವೇಳೆ ಡಿಸೆಂಬರ್ 5, 2023 ರಿಂದ ಏಪ್ರಿಲ್ 12, 2024 ರವರೆಗೆ ಮಾಡಿದ ಅಪರಾಧಗಳಿಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಕಾನೂನುಬಾಹಿರವಾಗಿ ಹಿಂಬಾಲಿಸುವುದು ಅಥವಾ ಬೆದರಿಕೆ, ರಾತ್ರಿ ವೇಳೆ ಉದ್ದೇಶಪೂರ್ವಕವಾಗಿ ಮನೆಗೆ ನುಗ್ಗುವುದು, ಸಾಮಾನ್ಯ ಹಲ್ಲೆ, ಉಸಿರುಗಟ್ಟುವಿಕೆ ಸೇರಿದಂತೆ ಕೌಟುಂಬಿಕ ದೌರ್ಜನ್ಯದ ಆರೋಪಗಳನ್ನು ಸ್ಲೇಟ್ ಹೊತ್ತಿದ್ದಾರೆ. 54 ವರ್ಷದ ಅವರು ಕೋರ್ಟ್ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪಗಳನ್ನು ಮತ್ತು ಕೌಟುಂಬಿಕ ಹಿಂಸಾಚಾರ ಆದೇಶವನ್ನು ಉಲ್ಲಂಘಿಸಿದ ಹತ್ತು ಆರೋಪಗಳನ್ನು ಎದುರಿಸುತ್ತಿದ್ದಾರೆ.
ಇಎಸ್ಪಿಎನ್ ಕ್ರಿಕ್ಇನ್ಪೋ ಪ್ರಕಾರ, ಕಳೆದ ಶುಕ್ರವಾರ ಸನ್ಶೈನ್ ಕೋಸ್ಟ್ನ ನಿವಾಸದಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಲವಾರು ವರ್ಷಗಳ ಕಾಲ ಕೌಟುಂಬಿಕ ಹಿಂಸಾಚಾರ ನಡೆಸಿದ ಹಿನ್ನೆಲಯಲ್ಲಿ ಅವರನ್ನು ಬಂಧಿಸಲಾಗಿದೆ. ಮಾಜಿ ಕ್ರಿಕೆಟಿಗನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಈ ಪ್ರಕರಣವನ್ನು ಮಂಗಳವಾರ ಅದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಯಾರು ಈ ಸ್ಲೇಟರ್
1993ರ ಆಶಸ್ ಪ್ರವಾಸದ ವೇಳೆ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ ಸ್ಲೇಟರ್ 74 ಟೆಸ್ಟ್ ಪಂದ್ಯಗಳಲ್ಲಿ 42.83ರ ಸರಾಸರಿಯಲ್ಲಿ 5312 ರನ್ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾ ಪರ 42 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 2004 ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದರು. ನಂತರ ಟಿವಿ ಕಾಮೆಂಟರಿ ವೃತ್ತಿಜೀವನದ ಕೆಲಸವನ್ನು ಆರಿಸಿಕೊಂಡರು.
ಮೈಕೆಲ್ ಸ್ಲೇಟರ್ ಬಂಧನ ಮತ್ತು ಆರೋಪಗಳು
ಅಕ್ಟೋಬರ್ 2021 ರಲ್ಲಿ, ಮೈಕೆಲ್ ಸ್ಲೇಟರ್ ಅವರನ್ನು ಕೌಟುಂಬಿಕ ಹಿಂಸಾಚಾರ, ಹಿಂಬಾಲಿಸುವಿಕೆ ಮತ್ತು ಅವರ ಮಾಜಿ ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಯಿತು. ಡಿಸೆಂಬರ್ 2021 ರಲ್ಲಿ, ಎನ್ಎಸ್ಡಬ್ಲ್ಯೂ ಪೊಲೀಸರು ಬಂಧಿಸಿದ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಅವರನ್ನು ಬಂಧಿಸಿದ್ದರು. ನಂತರ ಅವರನ್ನು ಪೊಲೀಸ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್ 2022 ರಲ್ಲಿ, ಮಾನಸಿಕ ಆರೋಗ್ಯದ ಆಧಾರದ ಮೇಲೆ ಇದೇ ರೀತಿಯ ಆರೋಪಗಳನ್ನು ವಜಾಗೊಳಿಸಲಾಗಿತ್ತು. ಮೇ 2022 ರ ಹೊತ್ತಿಗೆ, ಹಲ್ಲೆ ಮತ್ತು ಹಿಂಬಾಲಿಸುವ ಬೆದರಿಸುವ ಆರೋಪದ ಮೇಲೆ ಅವರನ್ನು ಮತ್ತೆ ಬಂಧಿಸಲಾಯಿತು. ಆದರೆ ಜುಲೈ 2022 ರಲ್ಲಿ, ಅವರನ್ನು ಮ್ಯಾನ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ಇದನ್ನೂ ಓದಿ: Hardik Pandya : ಪಾಂಡ್ಯ ಫಿಟ್ ಆಗಿಲ್ಲ, ಸುಮ್ಮನೆ ನಾಟಕ ಮಾಡುತ್ತಿದ್ದಾರೆ ಎಂದ ಆ್ಯಡಂ ಗಿಲ್ಕ್ರಿಸ್ಟ್
ಆಗಸ್ಟ್ 2022 ರಲ್ಲಿ, ಸಿಡ್ನಿಯ ಉತ್ತರ ಕಡಲತೀರದ ಫ್ರೆಂಚ್ ಫಾರೆಸ್ಟ್ನಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು. ಆ ಬಳಿಕ ಸ್ಲೇಟರ್ ಹಲ್ಲೆ ಮತ್ತು ದೈಹಿಕ ಅಥವಾ ಮಾನಸಿಕ ಹಾನಿಯ ಭಯ ಉಂಟುಮಾಡುವ ಉದ್ದೇಶದಿಂದ ಹಿಂಬಾಲಿಸುವ ಅಥವಾ ಬೆದರಿಸುವ ಪ್ರಯತ್ನದ ಆರೋಪಗಳನ್ನು ಎದುರಿಸಿದ್ದರು. ನಂತರ, ಸೆಪ್ಟೆಂಬರ್ ನಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು.
ಇದಲ್ಲದೆ, ಮಾರ್ಚ್ 2023 ರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಮತ್ತು ಪೊಲೀಸರಿಗೆ ಅಡ್ಡಿಪಡಿಸಿದ ಎರಡು ಆರೋಪಗಳಿಗಾಗಿ ಅವರನ್ನು ಬಂಧಿಸಲಾಗಿತ್ತು. ನವೆಂಬರ್ 2023 ರಲ್ಲಿಅವರಿಗೆ ಶಿಕ್ಷೆ ವಿಧಿಸಲಾಯಿತು. ಏಪ್ರಿಲ್ 2024 ರಲ್ಲಿ, ಅವರನ್ನು ಬಂಧಿಸಲಾಯಿತು ಮತ್ತು ಒಟ್ಟ 19 ಬಾರಿ ಆರೋಪ ಹೊರಿಸಲಾಯಿತು.