ಬೆಂಗಳೂರು: ಕನ್ನಡಿಗ ಹಾಗೂ ಐಪಿಎಲ್ನ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕ ಕೆ. ಎಲ್ ರಾಹುಲ್ ಬ್ಯಾಟ್ನಿಂದ ದೊಡ್ಡ ಮೊತ್ತದ ಸ್ಕೋರ್ಗಳು ಮೂಡಿ ಬರುತ್ತಿಲ್ಲ. ಐಪಿಎಲ್ನಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡುತ್ತಿರುವ ಹೊರತಾಗಿಯೂ ಅವರು ಹೆದರಿಕೊಂಡು ಬ್ಯಾಟ್ ಮಾಡುತ್ತಿದ್ದು, ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಉಳಿದ ಬ್ಯಾಟರ್ಗಳು ಅಬ್ಬರಿಸುತ್ತಿರುವ ನಡುವೆಯೇ ಕೆ. ಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋಗಿರುವುದು ಕ್ರಿಕೆಟ್ ವಿಶ್ಲೇಷಕರ ಗಮನಕ್ಕೆ ಬಂದಿದೆ. ಅದರ ಕುರಿತು ಕಾಮೆಂಟ್ಗಳನ್ನು ಕೂಡ ಶುರು ಮಾಡಿಕೊಂಡಿದ್ದಾರೆ. ಅಂತೆಯೇ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ರಾಹುಲ್ ಬ್ಯಾಟಿಂಗ್ ಬಗ್ಗೆ ಎಚ್ಚರಿಕೆ ನೀಡಲು ಮರೆತಿಲ್ಲ.
ಕೆ. ಎಲ್ ರಾಹುಲ್ ಹಾಲಿ ಆವೃತ್ತಿಯ ಮೂರು ಪಂದ್ಯಗಳಲ್ಲಿ ಕೇವಲ 63 ರನ್ ಮಾತ್ರ ಬಾರಿಸಿದ್ದಾರೆ. 35 ಅವರ ಗರಿಷ್ಠ ರನ್. ಅದು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಬಂದಿರುವ ರನ್ ಆಗಿದೆ. ಈ ಬಗ್ಗೆ ಮಾತನಾಡಿದ ಬಗ್ಗೆ ರವಿ ಶಾಸ್ತ್ರಿ, ಉಳಿದ ಬ್ಯಾಟರ್ಗಳು ಅಬ್ಬರಿಸುವ ನಡುವೆ ಕೆ. ಎಲ್ ರಾಹುಲ್ ಕಡಿಮೆ ಸ್ಟ್ರೈಕ್ ರೇಟ್ನೊಂದಿಗೆ ಆಡುವುದು ಸರಿಯಲ್ಲ. ಅವರು ಕೂಡ ವೇಗದ ರನ್ ಗಳಿಕೆಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023 : ಕೆ. ಎಲ್ ರಾಹುಲ್ ಹೀಗೆ ಆಡಿದರೆ ಲಕ್ನೊ ಸೂಪರ್ ಜಯಂಟ್ಸ್ ತಂಡಕ್ಕೆ ಕಷ್ಟ
ರಾಹುಲ್ ದೊಡ್ಡ ಸ್ಕೋರ್ ಬಾರಿಸುವ ಗುರಿಯೊಂದಿಗೆ ಕಣಕ್ಕೆ ಇಳಿಯಬೇಕು. ಅದಕ್ಕೆ ಹೆಚ್ಚು ಆಕ್ರಮಣಕಾರಿ ಮನೋಭಾವ ತೋರಬೇಕಾಗಿದೆ. ಕೈಲ್ ಮೇಯರ್ಸ್, ಸ್ಟೋಯ್ನಿಸ್, ಕ್ವಿಂಟನ್ ಡಿ ಕಾಕ್ ಅವರಂಥ ಆಟಗಾರರು ಇರುವಾಗ ರಾಹುಲ್ ಅವರಿಗೆ ಪೈಪೋಟಿ ಒಡ್ಡಬೇಕು. ಲಕ್ನೊದಲ್ಲಿ ಹೊಡೆಬಡಿಯ ದಾಂಡಿಗರೇ ತುಂಬಿಕೊಂಡಿದ್ದಾರೆ. ಹೀಗಾಗಿ ರಾಹುಲ್ ಜೋರಾಗಿ ಬ್ಯಾಟ್ ಬೀಸುವುದು ಅನಿವಾರ್ಯ ಎಂದು ಅವರು ಹೇಳಿದರು.
ಕಳೆಗುಂದಿದ ರಾಹುಲ್
ಕೆ. ಎಲ್ ರಾಹುಲ್ ಕಳೆದ ಕೆಲವು ತಿಂಗಳಿಂದ ಪೇಲವ ಪ್ರದರ್ಶನ ನೀಡುತ್ತಿದ್ದರೆ. ಭಾರತ ತಂಡದ ಪರವಾಗಿಯೂ ಅವರು ಉತ್ತಮವಾಗಿ ಬ್ಯಾಟ್ ಬೀಸುತ್ತಿಲ್ಲ. ಇದರಿಂದ ಸತತವಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳೆ ಟೀಮ್ ಇಂಡಿಯಾದ ಉಪ ನಾಯಕನ ಪಟ್ಟ ಪಡೆದುಕೊಂಡಿದ್ದ ಅವರು ಎರಡೇ ಪಂದ್ಯದಲ್ಲಿ ಅವಕಾಶ ಕಳೆದುಕೊಂಡಿದ್ದರು. ಮುಂದಿನ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಕೂಡ ಗಿಟ್ಟಿಸಿಕೊಂಡಿರಲಿಲ್ಲ. ಅದೇ ರೀತಿ ಏಕ ದಿನ ಸರಣಿಯ ಒಂದು ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಅವರು ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡಿರಲಿಲ್ಲ. ಇದೀಗ ಮತ್ತೆ ಅವರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ.