Site icon Vistara News

Virat Kohli : ಕೊಹ್ಲಿ ಜೊತೆ ಜಗಳವಾಡಬೇಡಿ: ಇಂಗ್ಲೆಂಡ್​ ತಂಡಕ್ಕೆ ಮಾಜಿ ಆಟಗಾರನ ಸಲಹೆ

Virat Kohli

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್​ ತಂಡಗಳ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ ನಡೆಯುತ್ತಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯ ಫಲಿತಾಂಶ ಹೇಗೆ ಮೂಡಿಬರಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಗ್ರೇಮ್ ಸ್ವಾನ್ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜತೆ ಮಾತಿನ ಸಮರ ನಡೆಸಬೇಡಿ ಎಂದು ಸಲಹೆ ಕೊಟ್ಟಿದ್ದಾರೆ. ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ಕ್ರಿಕೆಟ್ ತಂಡವು ಈ ತಿಂಗಳ ಕೊನೆಯಲ್ಲಿ ಆತಿಥೇಯ ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ.

ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ 2012ರಲ್ಲಿ ಭಾರತದಲ್ಲಿ ಇಂಗ್ಲೆಂಡ್​​ನ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ತಂಡದ ಭಾಗವಾಗಿದ್ದರು. ಅವರಿಗೆ ಭಾರತದ ಪರಿಸ್ಥಿತಿಯ ಅನುಭವವಿದೆ. ಹೀಗಾಗಿ ಸರಣಿ ಕುರಿತು ಮಾತನಾಡಿ ಮುಂಬರುವ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಜತೆ ಯಾವುದೇ ಮೌಖಿಕ ಸಮರದಲ್ಲಿ ತೊಡಗಿಸಿಕೊಳ್ಳದಂತೆ ಪ್ರವಾಸಿ ತಂಡಕ್ಕೆ ಸೂಚನೆ ಕೊಟ್ಟಿದ್ದಾರೆ. ಬೆನ್ ಸ್ಟೋಕ್ಸ್ ಅವರ ಪಡೆ ಭಾರತ ವಿರುದ್ಧ ನ್ಯಾಯಯುತ ಆಟವಾಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : Virat kohli : ಟಿ20 ವಿಶ್ವ ಕಪ್​ ತಂಡದಲ್ಲಿ ವಿರಾಟ್​, ರೋಹಿತ್ ಇರಲೇಬೇಕು ಎಂಬುದಕ್ಕೆ ಐದು ಕಾರಣಗಳು ಇಲ್ಲಿವೆ

ಕೊಹ್ಲಿ ಸಮರದ ಬಿಸಿಯಲ್ಲಿ ಸಿಕ್ಕಾಪಟ್ಟೆ ರನ್​ ಬಾರಿಸಿ ಬಿಡುತ್ತಾರೆ. ಹೀಗಾಗಿ ಭಾರತದ ಬ್ಯಾಟಿಂಗ್ ದಂತಕಥೆ ಜತೆಗಿನ ಜಗಳವು ಇಂಗ್ಲಿಷ್ ತಂಡಕ್ಕೆ ಹಿನ್ನಡೆಯನ್ನುಂಟು ಮಾಡಬಹುದು ಎಂದು ಸ್ವಾನ್ ಹೇಳಿದ್ದಾರೆ. ಸ್ಕೈ ಸ್ಪೋರ್ಟ್ಸ್ ಪಾಡ್​ಕಾಸ್ಟ್​​ನಲ್ಲಿ ಮಾತನಾಡುವಾಗ ಈ ಸಲಹೆ ಕೊಟ್ಟಿದ್ದಾರೆ.

ನಮಗೂ ಸೂಚನೆಯಿತ್ತು

ವಿರಾಟ್ ಕೊಹ್ಲಿಗೆ 2012 ಪ್ರವಾಸದ ವೇಳೆ ನಮಗೆ ಸೂಚನೆ ಕೊಟ್ಟಿದ್ದರು. ಏಕೆಂದರೆ ಅವರು ಮಾತಿನ ಚಕಮಕಿಯ ನಡುವೆ ಸಿಕ್ಕಾಪಟ್ಟೆ ರನ್​ ಮಾಡುತ್ತಾರೆ ಎಂದು ಎಚ್ಚರಿಕೆ ಕೊಟ್ಟಿದ್ದರು ಎಂದು ಹೇಳಿದ್ದರು. ವಿರಾಟ್ ಕೊಹ್ಲಿ ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ20 ಐ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರಿಕೆಟಿಗ ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದವರಾಗಿ ಹೊರಹೊಮ್ಮಿದ್ದರು.

ಇಂಗ್ಲೆಂಡ್​ ತಂಡ :

ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆ್ಯಂಡರ್ಸನ್, ಜೋ ರೂಟ್, ಗಸ್ ಅಟ್ಕಿನ್ಸನ್, ಜಾನಿ ಬೈರ್​ಸ್ಟೋವ್​ ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲೆ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್.

Exit mobile version