Site icon Vistara News

ಗಾಂಜಾ ಮಾರಾಟ ಯತ್ನದಲ್ಲಿ ಸಿಕ್ಕಿ ಬಿದ್ದ ಮಾಜಿ ರಣಜಿ ಆಟಗಾರ; 23 ಕೆಜಿ ಗಾಂಜಾ ವಶ

Budumuru Nagaraju

ಹೈದರಾಬಾದ್‌​: ಕೆಲ ತಿಂಗಳ ಹಿಂದೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯ(CM YS Jagan Mohan Reddy) ಹೆಸರನ್ನು ದುರುಪಯೋಗಪಡಿಸಿ 60 ಕಂಪೆನಿಗಳಿಗೆ 3 ಕೋಟಿ ರೂ. ವಂಚಿಸಿ ಬಂಧನಕ್ಕೆ ಒಳಗಾಗಿದ್ದ ಮಾಜಿ ರಣಜಿ ಕ್ರಿಕೆಟಿಗ ನಾಗರಾಜು ಬುಡುಮುರು(Budumuru Nagaraju) ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾರೆ. ಗಾಂಜಾ ಮಾರಾಟಕ್ಕೆ ಯತ್ನಿಸಿದ ವೇಳೆ ಅವರನ್ನು ಬಂಧಿಸಲಾಗಿದೆ.

ನಾಗರಾಜು ಬುಡುಮುರು ಅವರಿಂದ 23 ಕೆ.ಜಿ ತೂಕದ ಎರಡು ಚೀಲ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒರಿಸ್ಸಾದ ಪರ್ಲಕಿಮಿಡಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸಿದ್ದಾಗಿ ಅವರು ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾರೆ.

ಎಂಬಿಎ ಪದವೀಧರ ನಾಗರಾಜು, ಆರಂಭದಲ್ಲಿ ರಣಜಿ ಕ್ರಿಕೆಟ್​ನಲ್ಲಿ ಮಿಂಚಿದ್ದರು. ಬಳಿಕ ಕಳಪೆ ಪ್ರದರ್ಶನ ತೋರಿ ಕ್ರಿಕೆಟ್​ನಿಂದ ದೂರವಾಗಿದ್ದರು. ಇದಾದ ಬಳಿಕ ವಂಚನೆಯನ್ನು(Cheating Case) ವೃತ್ತಿಯನ್ನಾಗಿ ಮಾಡಿಕೊಂಡರು. ಕಳೆದ ಡಿಸೆಂಬರ್​ನಲ್ಲಿ ತಮ್ಮ ತವರಿನ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರ ಉದ್ಯೋಗಿಯೊಬ್ಬರನ್ನು ಕರೆಸಿಕೊಂಡು ಜಗನ್ ಮೋಹನ್ ರೆಡ್ಡಿಯ ಸಹಾಯಕನಂತೆ ನಟಿಸಿ, ರಾಜ್ಯದ ಉದಯೋನ್ಮುಖ ಕ್ರಿಕೆಟಿಗರಿಗೆ ಪ್ರೋತ್ಸಾಹಿಸುವ ನೆಪದಲ್ಲಿ ಇಲ್ಲಿನ ಕಾರ್ಪೊರೇಟ್‌ ಒಬ್ಬರ ಬಳಿ ಹಣ ಪಡೆದು ವಂಚಿಸಿದ್ದರು. ಈಗಾಗಲೇ ನಾಗರಾಜು ವಿರುದ್ಧ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸುಮಾರು 30 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 25 ವಂಚನೆ ಪ್ರಕರಣಗಳಿವೆ.

Cheating Case: ವಂಚನೆ ಆರೋಪ; ಮಾಜಿ ರಣಜಿ ಆಟಗಾರನ ಬಂಧನ

ನಾಗರಾಜು ಹೆಸರಾಂತ ವ್ಯಕ್ತಿಗಳ ಹೆಸರು ಬಳಸಿಕೊಂಡು ಹಲವರಿಗೆ ವಂಚನೆ ಮಾಡುತ್ತಿದ್ದ. ಮಾಜಿ ಕ್ರಿಕೆಟಿಗ ಎಂಎಸ್‌ಕೆ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿ ಹಲವು ಕಾರ್ಪೊರೇಟ್ ಕಂಪನಿಗಳಿಗೆ ಕರೆ ಮಾಡಿದ್ದಾರೆ. ಪ್ರಾಯೋಜಕತ್ವದ ನೆಪವೊಡ್ಡಿ ದೊಡ್ಡ ಮೊತ್ತವನ್ನು ಕಬಳಿಸುತ್ತಿದ್ದರು. ಈ ಕುರಿತು ಅನೇಕ ಸಂತ್ರಸ್ತರು ದೂರುಗಳನ್ನು ನೀಡಿದ್ದಾರೆ. ಸದ್ಯ ಪೊಲೀಸ್​ ಅತಿಥಿಯಾಗಿರುವ ನಾಗರಾಜು ಬಳಿಯಿಂದ ಗಾಂಜಾ ಮತ್ತು ದೊಡ್ಡ ಮೊತ್ತದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Exit mobile version