ನವ ದೆಹಲಿ: ನಾಯಕ ರೋಹಿತ್ ಶರ್ಮಾ (65 ರನ್) ಅವರ ಅರ್ಧ ಶತಕ ಹಾಗೂ ತಿಲಕ್ ವರ್ಮಾ (41) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಮುಂಬಯಿ ಇಂಡಿಯನ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ವಿಜಯ ಸಾಧಿಸಿದೆ. ಈ ಪಂದ್ಯವೂ ಹಾಲಿ ಆವೃತ್ತಿಯ ಮತ್ತೊಂದು ಲಾಸ್ಟ್ ಬಾಲ್ ಥ್ರಿಲ್ ಎನಿಸಿಕೊಂಡಿತು. ಈ ಮೂಲಕ ಮುಂಬಯಿ ಇಂಡಿಯನ್ಸ್ ತಂಡ ಹಾಲಿ ಆವೃತ್ತಿಯಲ್ಲಿ ಮೊದಲ ವಿಜಯ ದಾಖಲಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ಬಳಗ ಸತತ ನಾಲ್ಕನೇ ಸೋಲಿಗೆ ಒಳಗಾಯಿತು. ಮೂರು ಪಂದ್ಯ ಸೋತಾಗಲೇ ಅತ್ಯಂತ ನಿರಾಸೆಯಿಂದ ಟ್ವೀಟ್ ಮಾಡಿದ್ದ ಡೆಲ್ಲಿ ತಂಡದ ಮಾಲೀಕರಾದ ಪಾರ್ಥ್ ಜಿಂದಾಲ್ ಈ ಸೋಲಿನಿಂದ ಮತ್ತಷ್ಟು ನಿರಾಸೆ ಎದುರಿಸಲಿದ್ದಾರೆ.
ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.5 ಓವರ್ಗಳಲ್ಲಿ 171 ರನ್ಗಳಿಗೆ ಆಲ್ಔಟ್ ಆಯಿತು. ಗುರಿ ಬೆನ್ನಟ್ಟಿದ ಮುಂಬಯಿ ಬಳಗ ಇನಿಂಗ್ಸ್ನ ಕೊನೇ ಎಸೆತದಲ್ಲಿ 2 ರನ್ ಗಳಿಸಿ 4 ವಿಕೆಟ್ಗೆ 173 ರನ್ ಬಾರಿಸಿ ಗೆಲುವು ಸಾಧಿಸಿತು.
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಲು ಹೊರಟ ಮುಂಬಯಿ ತಂಡದ ಅರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ (31) ಭದ್ರ ಬುನಾದಿ ಹಾಕಿಕೊಟ್ಟರು. ಆದೆರ, ಅನಗತ್ಯ ರನ್ಗಾಗಿ ಓಡುವಾಗ ರನ್ಔಟ್ ಆದ ಕಿಶನ್ ನಿರಾಸೆಯಿಂದ ಹೊರ ನಡೆದರು. ಬಳಿಕ ಆಡಲು ಬಂದ ತಿಲಕ್ ವರ್ಮಾ ರೋಹಿತ್ ಜತೆ 67 ರನ್ಗಳ ಜತೆಯಾಟ ನೀಡಿದರು.
ಮತ್ತೆ ಸೂರ್ಯ ಫೇಲ್
ಹಾಲಿ ಆವತ್ತಿಯಲ್ಲಿ ವಿಫಲ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅವರು ತಾವೆದುರಿಸಿದ ಮೊದಲ ಎಸೆತಕ್ಕೇ ಔಟಾಗುವ ಮೂಲಕ ಅತ್ಯಂತ ನಿರಾಸೆಯಿಂದ ಪೆವಲಿಯನ್ಗೆ ಮರಳಿದರು. ಸ್ವಲ್ಪ ಹೊತ್ತಿನಲ್ಲೇ ರೋಹಿತ್ ಕೂಡ ವಿಕೆಟ್ ಕೀಪರ್ ಅಭಿಷೇಕ್ ಪೊರೆಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತು. ಆದರೆ, ಟಿಮ್ ಡೇವಿಡ್ (13) ಹಾಗೂ ಕ್ಯಾಮೆರಾನ್ ಗ್ರೀನ್ (17) ಮುಂಬಯಿಗೆ ಜಯ ತಂದುಕೊಟ್ಟರು.
ಡೆಲ್ಲಿಯ ಬ್ಯಾಟಿಂಗ್ ವೈಫಲ್ಯ
ಬ್ಯಾಟಿಂಗ್ ಆಹ್ವಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕರಾಗಿ ಬ್ಯಾಟ್ ಮಾಡಲು ಇಳಿದ ಡೇವಿಡ್ ವಾರ್ನರ್ ಹಾಗೂ ಪೃಥ್ವಿ ಶಾ (15) ಹೆಚ್ಚು ಹೊತ್ತು ಜತೆಯಾಟ ನೀಡಲಿಲ್ಲ. ಮತ್ತೊಮ್ಮೆ ವಿಫಲ ಪ್ರದರ್ಶನ ನೀಡಿದ ಪೃಥ್ವಿ ಬೆಹ್ರೆನ್ಡಾರ್ಫ್ಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಮನೀಶ್ ಪಾಂಡೆ ಮತ್ತೊಮ್ಮೆ ತಮ್ಮ ಮೇಲೆ ಭರವಸೆಯನ್ನು ಹುಸಿಗೊಳಿಸಿ 18 ಎಸೆತದಲ್ಲಿ 26 ರನ್ ಬಾರಿಸಿ ಔಟಾದರು. ಇದಾದ ಬಳಿಕ ಡೆಲ್ಲಿ ತಂಡ ಮೂರು ವಿಕೆಟ್ಗಳ ಸತತವಾಗಿ ಉರುಳಿದವು. ಯಶ್ ಧುಲ್ (2), ರೊವ್ಮನ್ ಪೊವೆಲ್ (4) ಹಾಗೂ ಲಲಿತ್ ಯಾದವ್ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ಗೆ ಮರಳಿದರು.
ಸಿಡಿದ ಅಕ್ಷರ್ ಪಟೇಲ್
98 ರನ್ಗಳಿಗೆ ಐದು ವಿಕೆಟ್ ಉರುಳಿದ ಕಾರಣ ಡೆಲ್ಲಿ ತಂಡ ಹಿನ್ನೆಡೆಗೆ ಒಳಗಾಯಿತು. ಈ ವೇಳೆ ಆಡಲು ಬಂದ ಅಕ್ಷರ್ ಪಟೇಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 22 ಎಸೆತಗಳಿಗೆ ತಮ್ಮ ಅರ್ಧ ಶತಕ ಪೂರೈಸಿದ ಎಡಗೈ ಬ್ಯಾಟರ್ 25 ಎಸೆತಗಳಲ್ಲಿ 54 ರನ್ ಬಾರಿಸಿದರು. ಇವರ ಇನಿಂಗ್ಸ್ನಲ್ಲಿ 4 ಫೋರ್ ಹಾಗೂ ಐದು ಸಿಕ್ಸರ್ಗಳು ಸೇರಿಕೊಂಡಿದ್ದವು. ಇವರ ಅಬ್ಬರದ ಬ್ಯಾಟಿಂಗ್ ಬಲದಿಂದಾಗಿ ಡೆಲ್ಲಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು.
ಇದನ್ನೂ ಓದಿ : IPL 2023 : ಹರ್ಷಲ್ ಎಡವಟ್ಟು ಮಾಡದಿದ್ದರೆ ಆರ್ಸಿಬಿಗೆ ಇತ್ತು ಇನ್ನೂ ಗೆಲುವಿನ ಚಾನ್ಸ್!
ಈ ವೇಳೆ ಮಾರಕ ದಾಳಿ ಸಂಘಟಿಸಿದ ಮುಂಬಯಿ ಬೌಲರ್ ಬೆಹ್ರೆನ್ಡಾರ್ಫ್, ಅಕ್ಷರ್ ಪಟೇಲ್ ಹಾಗೂ ಡೇವಿಡ್ ವಾರ್ನರ್ ವಿಕೆಟ್ ಪಡೆದ ಜತೆಯಾಟವನ್ನು ಮುರಿದರು. 18.1 ಓವರ್ಗಳಲ್ಲಿ 165 ರನ್ಗೆ ಡೆಲ್ಲಿ ತಂಡ ಏಳನೇ ವಿಕೆಟ್ ಕಳೆದುಕೊಂಡರೆ 172 ರನ್ಗಳಾಗುವಷ್ಟರಲ್ಲಿ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಮುಂಬಯಿ ಪರ ಬೌಲಿಂಗ್ನಲ್ಲಿ ಜೇಸನ್ ಬೆಹ್ರೆನ್ಡಾರ್ಫ್ 23 ರನ್ಗಳಿಗೆ 3 ವಿಕೆಟ್ ಪಡೆದರೆ, ಸ್ಪಿನ್ನರ್ ಪಿಯೂಶ್ ಚಾವ್ಲಾ 22 ರನ್ಗಳಿಗೆ 3 ವಿಕೆಟ್ ಪಡೆದರು. ರೀಲಿ ಮೆರಿಡಿತ್ 34 ರನ್ಗಳಿಗೆ 2 ವಿಕೆಟ್ ತಮ್ಮದಾಗಿಸಿಕೊಂಡರು.