ಡೆಲ್ಲಿ : ಐಪಿಎಲ್ನ ಹಾಲಿ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲೂ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಬಳಗ ಸೋಲು ಕಂಡಿದೆ. ಲಖನೌ ಸೂಪರ್ ಜಯಂಟ್ಸ್, ಗುಜರಾಟ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಹೀನಾಯ ಸೋಲುಗಳನ್ನು ಕಂಡಿವೆ. ತಂಡದ ಆಟಗಾರರಿಗೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ಹಂತಕ್ಕೇರಬಹುದು ಎಂಬ ವಿಶ್ವಾಸ ಇರಬಹುದು. ಅಭಿಮಾನಿಗಳು ಕೂಡ ಮುಂದಿನ ಪಂದ್ಯದಲ್ಲಿ ತಮ್ಮ ತಂಡ ಉತ್ತಮ ಪ್ರದರ್ಶನ ನೀಡಬಹುದು ಎಂದು ಸಮಾಧಾನ ಮಾಡಿಕೊಳುತ್ತಿದ್ದಾರೆ. ಆದರೆ, ಡೆಲ್ಲಿ ತಂಡದ ಮಾಲೀಕರಾದ ಪಾರ್ಥ್ ಜಿಂದಾಲ್ ಅವರಿಗೆ ಇದು ಬೇಸರ ತರಿಸಿದೆ. ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ಮಾಡಿದ್ದಾರೆ.
ಮೂರು ಪಂದ್ಯಗಳಲ್ಲಿ ಮೂರು ಸೋಲುಗಳು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನೋಡಲು ಕಷ್ಟವಾಗುತ್ತಿದೆ. ಬ್ಯಾಟಿಂಗ್ನಲ್ಲೂ ಯಾರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ ಹಾಗೂ ಮೈದಾನದಲ್ಲೂ ಜಿದ್ದು ತೋರಿಸುತ್ತಿಲ್ಲ. ಒಟಗ್ಗಿನ ಕುರಿತು ನಮಗೆ ನಂಬಿಕೆ ಇದೆ. ಮಂಗಳವಾರದಿಂದ ಉತ್ತಮ ಪ್ರದರ್ಶನ ನೀಡಬೇಕು ಹಾಗೂ ತಂಡದ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ಬರೆದುಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರ ನಡೆಯುವ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಸೆಣಸಾಡಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮವಾಗಿರುವ ಹೊರತಾಗಿಯೂ ಕೆಚ್ಚೆದೆಯ ಪ್ರದರ್ಶನ ನೀಡುತ್ತಿಲ್ಲ. ಡೇವಿಡ್ ವಾರ್ನರ್ ಸೇರಿದಂತೆ ಪ್ರಮುಖ ಆಟಗಾರರು ಗೆಲುವಿಗೆ ಪೂರಕವಾಗಿರುವ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಂಪೂರ್ಣವಾಗಿ ನೆಲಕ್ಕಚ್ಚಿದೆ. ಬೌಲಿಂಗ್ನಲ್ಲೂ ಡೆಲ್ಲಿ ತಂಡ ಗೆಲುವಿಗೆ ಪೂರಕ ಪ್ರದರ್ಶನ ನೀಡುತ್ತಿಲ್ಲ. ಪ್ರಮುಖ ಬೌಲರ್ಗಳು ಅನಗತ್ಯ ರನ್ಗಳನ್ನು ನೀಡುವ ಮೂಲಕ ಸೋಲಿಗೆ ಕಾರಣರಾಗುತ್ತಿದ್ದಾರೆ.
ರಾಜಸ್ಥಾನ್ ವಿರುದ್ಧ ಹೀನಾಯ ಪ್ರದರ್ಶನ
ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 57 ರನ್ಗಳ ಗೆಲುವು ದಾಖಲಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಈ ಸೋಲಿನಿಂದ ಹ್ಯಾಟ್ರಿಕ್ ಸೋಲು ಕಂಡ ಅವಮಾನಕ್ಕೆ ಸಿಲುಕಿತು. ರಾಜಸ್ಥಾನ್ ಆಡಿದ ಮೂರು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿತ್ತು.
ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ(Barsapara Cricket Stadium) ನಡೆದ ಶನಿವಾರದ ಐಪಿಎಲ್ನ ಡಬಲ್ ಹೆಡರ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್(60) ಮತ್ತು ಜಾಸ್ ಬಟ್ಲರ್(79) ಅವರ ಸೊಗಸಾದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಜವಾಬಿತ್ತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ ಆಟದಲ್ಲಿ 9 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಸೋಲೊಪ್ಪಿಕೊಂಡಿತು.