ಪ್ಯಾರಿಸ್: ಫ್ರೆಂಚ್ ಓಪನ್(French Open 2024) ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ(Rohan Bopanna)-ಮ್ಯಾಥ್ಯೂ ಎಬ್ಡೆನ್(Matthew Ebden) ಕಠಿಣ ಹೋರಾಟದ ಬಳಿಕ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್ನಲ್ಲಿ ಸಿಮೋನ್ ಬೊಲೆಲಿ- ಆಂಡ್ರಿಯಾ ವವಸ್ಸೋರಿ ಜೋಡಿಯ ಸವಾಲು ಎದುರಿಸಲಿದ್ದಾರೆ.
ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೋಪಣ್ಣ-ಮ್ಯಾಥ್ಯೂ ಜೋಡಿ ಸ್ಯಾಂಡರ್ ಗಿಲ್ಲೆ ಮತ್ತು ಜೊರಾನ್ ವಿಲೆಜೆನ್ ವಿರುದ್ಧ ಮೂರು ಸೆಟ್ಗಳ ಸುದೀರ್ಘ ಹೋರಾಟ ನಡೆಸಿ 7-6 (7-3), 5-7, 6-1 ಅಂತರದ ಗೆಲುವು ಸಾಧಿಸಿದರು. ಈ ಪಂದ್ಯ 2 ಗಂಟೆ 4 ನಿಮಿಷಗಳ ತನಕ ಸಾಗಿತು. ಕಳೆದ ಕೆಲವು ವರ್ಷಗಳಿಂದ ಇಂಡೋ-ಆಸೀಸ್ ಜೋಡಿ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಸೆಮಿಫೈನಲ್(French Open semis) ತಲುಪಿರುವ ಈ ಜೋಡಿ ಇಲ್ಲಿಯೂ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ Wimbledon 2023 : ಸೋಲಿನ ಹತಾಶೆಗೆ ರ್ಯಾಕೆಟ್ ಪುಡಿಗಟ್ಟಿದ ಜೊಕೊವಿಕ್! ಮುಂದೇನಾಯಿತು?
ಮೊದಲ ಸೆಟ್ ಟ್ರೈಬೇಕರ್ ಮೂಲಗ ಗೆದ್ದ ಬೋಪಣ್ಣ-ಮ್ಯಾಥ್ಯೂ ಜೋಡಿ ದ್ವಿತೀಯ ಸೆಟ್ನಲ್ಲಿ ಸೋಲು ಕಂಡರು. ಅಂತಿಮ ಹಾಗೂ ನಿರ್ಣಾಯಕ ಸೆಟ್ನಲ್ಲಿ ಶ್ರೇಷ್ಠ ಆಟವಾಡಿದ ಬೋಪಣ್ಣ ಮತ್ತು ಮ್ಯಾಥ್ಯೂ ಎದುರಾಳಿಗೆ ಕೇವಲ ಒಂದು ಸೆಟ್ ಮಾತ್ರ ಬಿಟ್ಟುಕೊಟ್ಟು ಭರ್ಜರಿ ಗೆಲುವು ಸಾಧಿಸಿದರು.
2 ತಿಂಗಳ ಹಿಂದಷ್ಟೇ ನಡೆದಿದ್ದ ಮಿಯಾಮಿ ಓಪನ್ ಟೆನಿಸ್ ಟೂರ್ನಿಯ(Miami Open 2024) ಪುರುಷರ ಡಬಲ್ಸ್‌ನಲ್ಲಿ ಬೋಪಣ್ಣ-ಮ್ಯಾಥ್ಯೂ ಜೋಡಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದಕ್ಕೂ ಮುನ್ನ ವರ್ಷಾರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಓಪನ್ ಗ್ರಾನ್ಸ್ಲಾಂನಲ್ಲಿಯೂ ಈ ಜೋಡಿ ಚಾಂಪಿಯನ್ ಆಗಿ ಐತಿಹಾಸಿಕ ಪ್ರಶಸ್ತಿ ಗೆದ್ದಿತ್ತು. 2017ರಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೋವ್ಸ್ಕಿ ಅವರೊಂದಿಗೆ ಬೋಪಣ್ಣ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.
ಎಲೆನಾ ರಿಬಕಿನಾಗೆ ಆಘಾತಕಾರಿ ಸೋಲು
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಅನುಭವಿ ಆಟಗಾರ್ತಿ ಕಜಾಕ್‌ಸ್ಥಾನದ ಎಲೆನಾ ರಿಬಕಿನಾ(Elena Rybakina) ಅವರು ಆಘಾತಕಾರಿ ಸೋಲು ಕಂಡಿದ್ದಾರೆ. ಜಾಸ್ಮಿನ್ ಪಾವೊಲಿನಿ(Jasmine Paolini) ವಿರುದ್ಧ 6-2, 4-6, 6-4 ಅಂತರದಲ್ಲಿ ಸೋಲು ಕಂಡರು. ಈ ಪಂದ್ಯ 2 ಗಂಟೆ 3 ನಿಮಿಷಗಳ ತನಕ ಸಾಗಿತು. ಪಾವೊಲಿನಿಗೆ ಇದು ಈ ಕೂಟದ ಚೊಚ್ಚಲ ಸೆಮಿಫೈನಲ್ ಪಂದ್ಯವಾಗಿದೆ. ನಾಲ್ಕನೇ ಶ್ರೇಯಾಂಕಿತ ರಿಬಕಿನಾ ಅವರನ್ನು ಮಣಿಸಿದ ಕಾರಣ ಈ ಬಾರಿಯ ಕ್ರಶಸ್ತಿ ರೇಸ್ನಲ್ಲಿ ಪಾವೊಲಿನಿ ಕೂಡ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.