ಪ್ಯಾರಿಸ್: ವರ್ಷದ ದ್ವಿತೀಯ ಗ್ರ್ಯಾನ್ ಸ್ಲಾಮ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ(French open 2023) ಇಂದಿನಿಂದ(ಭಾನುವಾರ) ಆರಂಭವಾಗಲಿದೆ. ಆದರೆ ಈ ಬಾರಿ ಟೂರ್ನಿ ಕೊಂಚ ಸಪ್ಪೆಯಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಆವೇ ಅಂಗಣದ ರಾಜ ಸ್ಪೇನ್‌ನ ರಫೆಲ್ ನಡಾಲ್ ಅವರ ಅನುಪಸ್ಥಿತಿ. ಆದರೆ ಈ ಟೂರ್ನಿಯಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಕ್ ಅವರಿಗೆ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ.
ನಡಾಲ್ ಅವರು ಗಾಯದಿಂದಾಗಿ ಈ ಬಾರಿ ಟೂರ್ನಿ ಆಡುತ್ತಿಲ್ಲ. ಇದರ ಜತೆಗೆ ದಿಗ್ಗಜ ಫೆಡರರ್ ಕಳೆದ ವರ್ಷ ನಿವೃತ್ತಿಯಾಗಿದ್ದಾರೆ. ಹೀಗಾಗಿ ನಡಾಲ್ ಅವರ 22 ಗ್ರ್ಯಾನ್ ಸ್ಲಾಮ್ಗಳ ದಾಖಲೆ ಮುರಿಯಲು ಜೋಕೊಗೆ ಇಲ್ಲಿ ಉತ್ತಮ ಅವಕಾಶವಿದೆ. ನಡಾಲ್ ಮತ್ತು ಜೋಕೊ ಸದ್ಯ 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದು ಜಂಟಿ ದಾಖಲೆ ಹೊಂದಿದ್ದಾರೆ.
ಟೂರ್ನಿಯಲ್ಲಿರುವ ಉಳಿದ ಸ್ಟಾರ್ ಟೆನಿಸಿಗರೆಂದರೆ, ಅಗ್ರ ಶ್ರೇಯಾಂಕಿತ, ಹಾಲಿ ಯುಎಸ್ ಓಪನ್ ಚಾಂಪಿಯನ್ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್, 2ನೇ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, ಕಳೆದ ಆವೃತ್ತಿ ರನ್ನರ್-ಅಪ್ ಕ್ಯಾಸ್ಪೆರ್ ರುಡ್, ಆ್ಯಂಡ್ರೆ ರುಬ್ಲೆವ್, ಹೋಲ್ಗರ್ ರ್ಯುನ್, ಸ್ಟೆಫಾನೊಸ್ ಸಿಸಿಪಾಸ್. ಮಹಿಳೆಯರಲ್ಲಿ ಸ್ವಿಯಾಟೆಕ್ ಜೊತೆಗೆ ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಅರೈನಾ ಸಬಲೆಂಕಾ, ಹಾಲಿ ವಿಂಬಲ್ಡನ್ ಚಾಂಪಿಯನ್ ಎಲೆನಾ ರಬೈಕೆನಾ ಸೇರಿದಂತೆ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಇದನ್ನೂ ಓದಿ ITF Women’s Open: ಮಹಿಳಾ ಐಟಿಎಫ್ ಟೆನಿಸ್: ಫೈನಲ್‌ನಲ್ಲಿ ಮುಗ್ಗರಿಸಿದ ಅಂಕಿತಾ ರೈನಾ
ಬಹುಮಾನ ಮೊತ್ತವೆಷ್ಟು
ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಬಹುಮಾನ ಮೊತ್ತವನ್ನು ಸಂಘಟಕರು ಈ ಬಾರಿ ಹೆಚ್ಚಿಸಿದ್ದಾರೆ. ಅದರಂತೆ ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ವಿಜೇತರಯ ತಲಾ 20.60 ಕೋಟಿ ರೂ. ಪಡೆಯಲಿದ್ದಾರೆ. ಟೂರ್ನಿಯು ಒಟ್ಟು 444 ಕೋಟಿ ರೂ. ಬಹುಮಾನ ಮೊತ್ತ ಒಳಗೊಂಡಿರಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಬಹುಮಾನ ಮೊತ್ತವನ್ನು ಶೇ 12.3 ಹೆಚ್ಚಳವಾಗಿದೆ. 2022ರ ಟೂರ್ನಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್ನರು 19.69 ಕೋಟಿ ರೂ ನಗದು ಬಹುಮಾನ ಪಡೆದುಕೊಂಡಿದ್ದರು. ಸಿಂಗಲ್ಸ್ ವಿಭಾಗದ ಒಟ್ಟು ಬಹುಮಾನ ಮೊತ್ತವನ್ನು ಕಳೆದ ಬಾರಿಗಿಂತ ಶೇ 9.1 ಹೆಚ್ಚಿಸಲಾಗಿದೆ. ಮೊದಲ ಮೂರು ಸುತ್ತುಗಳಲ್ಲಿ ಸೋಲು ಅನುಭವಿಸುವ ಆಟಗಾರರು ಪಡೆಯುವ ಮೊತ್ತ ಈ ವರ್ಷ ಶೇ 11 ರಿಂದ 13 ಏರಿಕೆಯಾಗಿದೆ. ಕಳೆದ ವರ್ಷದ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋತಿದ್ದ ಆಟಗಾರರು 55 ಲಕ್ಷ ನಗದು ಬಹುಮಾನ ಗಳಿಸಿದ್ದರು.