Site icon Vistara News

Asian Games : ಸಾರ್ವಕಾಲಿಕ ದಾಖಲೆಯ 107 ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ಅಭಿಯಾನ ಮುಗಿಸಿದ ಭಾರತ

Asian Games indian medals

ಹ್ಯಾಂಗ್ಝೌ : ಭಾರತ ಏಷ್ಯನ್​ ಗೇಮ್ಸ್​ನ ಇತಿಹಾಸದಲ್ಲಿ (Asian Games) ನೂತನ ದಾಖಲೆ ಬರೆದಿದೆ. ಸ್ಪರ್ಧೆಯ 14ನೇ ದಿನವಾದ ಶನಿವಾರ (ಅಕ್ಟೋಬರ್​ 7) ಸಂಜೆಯ ವೇಳೆಗೆ ಭಾರತ ಒಟ್ಟು 107 ಪದಕಗಳನ್ನು ಬಾಚಿಕೊಂಡಿದೆ. ಈ ಮೂಲಕ ಏಷ್ಯನ್ ಗೇಮ್ಸ್​ನಲ್ಲಿ ಇದುವರೆಗಿನ ಗರಿಷ್ಠ ಪದಕಗಳ ದಾಖಲೆಯನ್ನು ಸೃಷ್ಟಿಸಿದೆ. ಕ್ರೀಡಾಕೂಟದ ಕೊನೇ ದಿನವಾದ ಭಾನುವಾರ ಭಾರತದ ಸ್ಪರ್ಧಿಗಳು ಕಣದಲ್ಲಿ ಇಲ್ಲ. ಹೀಗಾಗಿ ಭಾರತದ ಅಭಿಯಾನ ಅತ್ಯಂತ ಸಂಭ್ರಮದೊಂದಿಗೆ ಹಾಗೂ ಆಶಾದಾಯಕವಾಗಿ ಮುಕ್ತಾಯಗೊಂಡಿದೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಕೂಟದಲ್ಲಿ ಭಾರತ 70 ಪದಕಗಳನ್ನು ತನ್ನದಾಗಿಸಿಕೊಂಡಿತ್ತು. ಅದು ಆವರೆಗಿನ ಗರಿಷ್ಠ ಪದಕಗಳ ದಾಖಲೆಯಾಗಿತ್ತು. ಆ ಮೈಲುಗಲ್ಲನ್ನು ದಾಟಿದ ನವ ಭಾರತ, ಅದರ ಮೇಲೆ 37 ಹೆಚ್ಚುವರಿ ಪದಕಗಳನ್ನು ಗೆದ್ದಿದೆ. ಇದರೊಂದಿಗೆ ಭಾರತೀಯ ಕ್ರೀಡಾಕ್ಷೇತ್ರ ಹೊಸ ಹಾದಿಯಲ್ಲಿ ಸಾಗುತ್ತಿರುವುದನ್ನು ಸಾಬೀತುಪಡಿಸಿದೆ.

ಭಾರತದ 655 ಸ್ಪರ್ಧಿಗಳ ಬಲವಾದ ತಂಡದೊಂದಿಗೆ ಚೀನಾದ ಹ್ಯಾಂಗ್ಝೌಗೆ ತೆರಳಿತ್ತು. ವಾಪಸ್​ ಬರುವಾಗ ದಾಖಲೆಯ 107 ಪದಕಗಳೊಂದಿಗೆ ಬರುತ್ತಿದೆ. ಕ್ರೀಡಾಪ್ರೇಮಿಗಳಿಗೆ ಹಾಗೂ ಪೋಷಕರಿಗೆ ಈ ಸಾಧನೆ ದೊಡ್ಡ ಸಮ್ಮಾನ. ಈ ಗಮನಾರ್ಹ ಸಾಧನೆಯು ಏಷ್ಯನ್ ಕ್ರೀಡೆಗಳಲ್ಲಿ ಭಾರತದ ಬಲವನ್ನು ಇನ್ನಷ್ಟು ವೃದ್ಧಿಸಿದೆ. ಭಾರತದ ಪದಕ ಪಟ್ಟಿಯಲ್ಲಿ 28 ಚಿನ್ನ ಇರುವುದು ಮತ್ತೊಂದು ವಿಶೇಷ. ಜತೆಗೆ 38 ಬೆಳ್ಳಿ ಮತ್ತು 41 ಕಂಚಿನ ಪದಕಗಳಿವೆ.

ಇದನ್ನೂ ಓದಿ: Asian Games : ವಿವಾದಾತ್ಮಕ ಕಬಡ್ಡಿ ಫೈನಲ್​ನಲ್ಲಿ ಕೊನೆಗೂ ಚಿನ್ನ ಗೆದ್ದ ಭಾರತ ತಂಡ

2018 ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 16 ಚಿನ್ನದ ಪದಕಗಳನ್ನು ಪಡೆದಿತ್ತು. ಈ ಬಾರಿ 28 ಚಿನ್ನದ ಪದಕಗಳನ್ನು ಗೆದ್ದಿದೆ. ಈ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಯ ಗುಣಮಟ್ಟ ಹಾಗೂ ಕೌಶಲಕ್ಕೆ ತಕ್ಕ ಹಾಗೆ ಭಾರತದ ಸ್ಪರ್ಧಿಗಳು ಪಳಗಿರುವುದು ಖಚಿತವಾಗಿ. ಸ್ಪರ್ಧೆಯ ನಿರ್ಣಾಯಕ 14ನೇ ದಿನದಂದು, ಭಾರತವು ಒಟ್ಟು 12 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಎತ್ತರಕ್ಕೆ ಏರಿತು. ಇದರಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸೇರಿವೆ. ಈ ಅಸಾಧಾರಣ ಯಶಸ್ಸು ಭಾರತೀಯ ಕ್ರೀಡಾಪಟುಗಳು, ತರಬೇತುದಾರರು ಮತ್ತು ಪ್ರತಿಭೆಯನ್ನು ಪೋಷಿಸುವ ವ್ಯವಸ್ಥೆ, ಅಥ್ಲೀಟ್​ಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.

ಒಲಿಂಪಿಕ್ಸ್​ ಟಿಕೆಟ್ ಪಡೆದ ಸ್ಪರ್ಧಿಗಳು

ಗೆದ್ದಿರುವ ಪ್ರತಿಷ್ಠಿತ ಪದಕಗಳ ಹೊರತಾಗಿ ಹ್ಯಾಂಗ್ಝೌನ ಏಷ್ಯನ್ ಗೇಮ್ಸ್ ಮುಂಬರುವ ಪ್ಯಾರಿಸ್ 2024 ಒಲಿಂಪಿಕ್ಸ್​​ಗೆ ಅಪೇಕ್ಷಿತ ಅರ್ಹತೆಗಳನ್ನು ಭಾರತೀಯ ಸ್ಪರ್ಧಿಗಳಿಗೆ ಒದಗಿಸಿತು. ಏಷ್ಯನ್​ ಗೇಮ್ಸ್​ನ ಪದಕಗಳು ಒಲಿಂಪಿಕ್ಸ್​ನ ಅರ್ಹತೆಗೆ ಮಾನದಂಡವಾಗಿದ್ದವು. ವಿವಿಧ ಕ್ರೀಡೆಗಳಲ್ಲಿ ಒಟ್ಟು 74 ಒಲಿಂಪಿಕ್ ಕೋಟಾಗಳನ್ನು ಭಾರತದ ಸ್ಪರ್ಧಿಗಳು ಪಡೆದುಕೊಂಡಿದ್ದಾರೆ. ಆರ್ಚರಿಯಲ್ಲಿ 6, ಆರ್ಟಿಸ್ಟಿಕ್​ ಸ್ವಿಮ್ಮಿಂಗ್​ನಲ್ಲಿ 10, ಬಾಕ್ಸಿಂಗ್​​ನಲ್ಲಿ 34, ಬ್ರೇಕಿಂಗ್​ನಲ್ಲಿ 2, ಹಾಕಿಯಲ್ಲಿ 2, ಮಾಡರ್ನ್​ ಪೆಂಟಾಥ್ಲಾನ್​ನಲ್ಲಿ 10, ಸೇಯ್ಲಿಂಗ್​ನಲ್ಲಿ 6, ಟೆನಿಸ್​ನಲ್ಲಿ 2 ಮತ್ತು ವಾಟರ್ ಪೋಲೊದಲ್ಲಿ 2 ಅರ್ಹತೆಗಳು ಲಭಿಸಿದವು.

ಇದನ್ನೂ ಓದಿ : Asian Games: ಪಂದ್ಯ ರದ್ದಾದರೂ ಐತಿಹಾಸಿಕ ಚಿನ್ನ ಗೆದ್ದ ಭಾರತ ಪುರುಷರ ಕ್ರಿಕೆಟ್​ ತಂಡ

ಒಟ್ಟಾರೆ ಏಷ್ಯನ್ ಗೇಮ್ಸ್ 2023 ಪದಕಗಳ ಪಟ್ಟಿಯಲ್ಲಿ ಆತಿಥೇಯ ಚೀನಾ ಅಗ್ರಸ್ಥಾನದಲ್ಲಿದೆ. 187 ಚಿನ್ನದ ಪದಕಗಳೊಂದಿಗೆ ಅದು ಮುಂಚೂಣಿ ಸ್ಥಾನ ಪಡೆದಿದೆ. ಜಪಾನ್ 47 ಚಿನ್ನದ ಪದಕಗಳೊಂದಿಗೆ ಮತ್ತು ಕೊರಿಯಾ ಗಣರಾಜ್ಯ 36 ಚಿನ್ನದ ಪದಕಗಳೊಂದಿಗೆ ನಂತರದ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.

Exit mobile version