ಅಹ್ಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಹೃದಯ ವಿದ್ರಾವಕ ಸೋಲನ್ನು ಅನುಭವಿಸಿತ್ತು. ಪಂದ್ಯದ ಅಂತ್ಯದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಈ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಕೆಲವರು ಇದನ್ನು ಟೀಕಿಸಿದ್ದರೆ ಇನ್ನೂ ಕೆಲವರು ಹೊಗಳಿದ್ದರು.
Gautam Gambhir in a podcast. pic.twitter.com/6RGpiZPI6T
— Mufaddal Vohra (@mufaddal_vohra) December 8, 2023
ಸ್ಟೇಡಿಯಂ ಮತ್ತು ಡ್ರೆಸ್ಸಿಂಗ್ ರೂಮ್ನಲ್ಲಿ ಮೋದಿಯವರ ಉಪಸ್ಥಿತಿಯು ವಿರೋಧ ಪಕ್ಷಗಳ ನಾಯಕರಿಗೆ ಇಷ್ಟವಾಗಿರಲಿಲ್ಲ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಹಲವರು ಸೋಲಿಗೆ ಮೋದಿಯೇ ಕಾರಣ ಎಂದು ಟ್ರೋಲ್ ಮಾಡಿದ್ದರು. ರಾಹುಲ್ ಅವರಂತೂ ಭಾಷಣವೊಂದರಲ್ಲಿ ಮೋದಿಯನ್ನು ಕೆಟ್ಟ ಕಾಲ್ಗುಣದವರು (ಪನೌತಿ) ಎಂದು ಹೇಳಿದ್ದರು. ಮೋದಿ ಹೋಗಿದ್ದಕ್ಕೆ ಭಾರತ ಸೋತಿತು ಎಂಬರ್ಥದಲ್ಲಿ ಮಾತನಾಡಿದ್ದರು. ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಭಾರತದ ಮಾಜಿ ಕ್ರಿಕೆಟಿಗ ಮತ್ತು 2011 ರ ವಿಶ್ವಕಪ್ ವಿಜೇತ ಗೌತಮ್ ಗಂಭೀರ್ ಈ ರೀತಿ ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಪ್ರಧಾನಿ ಡ್ರೆಸಿಂಗ್ ರೂಮ್ಗೆ ಭೇಟಿ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಪನೌತಿ ಎಂದಿರುವುದು ಪ್ರಧಾನಿಯೊಬ್ಬರಿಗೆ ಬಳಸಿದ ಅತ್ಯಂತ ಕೆಟ್ಟ ಪದ ಎಂಬುದಾಗಿ ಹೇಳಿದ್ದಾರೆ.
ಪನೌತಿ ಪದ ಬಳಕೆ ತಪ್ಪು
2011ರ ವಿಶ್ವಕಪ್ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಸೆಮಿಫೈನಲ್ ವೇಳೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಆಟಗಾರರನ್ನು ಭೇಟಿ ಮಾಡಿದ್ದರು. ಮೋದಿಯ ಭೇಟಿಯೂ ಅಷ್ಟೇ ಪ್ರಾಮುಖ್ಯವಾದುದು ಎಂದು ಭಾರತದ ಮಾಜಿ ಆಟಗಾರ ಹೇಳಿದ್ದಾರೆ.
“ಪನೌತಿ ಎಂಬ ಪದವನ್ನು ಬಹುಶಃ ಯಾರ ವಿರುದ್ಧವೂ ಬಳಸಬಾರದು. ವಿಶೇಷವಾಗಿ ಈ ದೇಶದ ಪ್ರಧಾನಿಯ ವಿರುದ್ಧ ಬಳಸಬಹುದಾದ ಅತ್ಯಂತ ಕೆಟ್ಟ ಪದ 2011 ರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ನಲ್ಲಿ ಡಾ.ಮನಮೋಹನ್ ಸಿಂಗ್ ಅಲ್ಲಿದ್ದರು. ನಾವು ಆ ಪಂದ್ಯವನ್ನು ಸೋತಿದ್ದರೆ ಮತ್ತು ಅವರು ನಮ್ಮನ್ನು ಭೇಟಿಯಾಗಲು ಬಂದಿದ್ದರೆ ಅದರಲ್ಲಿ ತಪ್ಪೇನಿದೆ” ಎಂದು ಗಂಭೀರ್ ಇತ್ತೀಚೆಗೆ ಪಾಡ್ಕಾಸ್ಟ್ವೊಂದರಲ್ಲಿ ಹೇಳಿದ್ದಾರೆ.
ಟ್ರೋಫಿ ನೀಡಿದ್ದ ಮೋದಿ
ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್ ಕೂಡ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಹಾಜರಿದ್ದರು. ಆತಿಥೇಯರನ್ನು ಸೋಲಿಸಿ ಆರನೇ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಮಾರ್ಲ್ಸ್ ಮತ್ತು ಪಿಎಂ ಮೋದಿ ಇಬ್ಬರೂ ಟ್ರೋಫಿ ವಿತರಿಸಿದ್ದರು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ವಿಶ್ವ ಕಪ್ ಸ್ವೀಕರಿಸಿದ್ದರು.
ನಾಯಕ ಕಮಿನ್ಸ್ (34ಕ್ಕೆ 2) ಅದ್ಭುತವಾಗಿ ಬೌಲಿಂಗ್ ಮಾಡಿ ವಿರಾಟ್ ಕೊಹ್ಲಿ (63 ಎಸೆತಗಳಲ್ಲಿ 54 ರನ್) ಮತ್ತು ಶ್ರೇಯಸ್ ಅಯ್ಯರ್ (3 ಎಸೆತಗಳಲ್ಲಿ 4 ರನ್) ಅವರನ್ನು ಔಟ್ ಮಾಡಿದ ಕಾರಣ ಭಾರತವು 240 ರನ್ಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಟ್ರಾವಿಸ್ ಹೆಡ್ (120 ಎಸೆತಗಳಲ್ಲಿ 137 ರನ್) ಅವರ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ 43 ಓವರ್ಗಳಲ್ಲಿ ಗುರಿ ತಲುಪಿತು.