ಮುಂಬಯಿ: ಐಪಿಎಲ್ (IPL 2023) ಪಂದ್ಯದ ವೇಳೆ ಮೈದಾನದಲ್ಲೇ ಕಿತ್ತಾಡಿಕೊಂಡಿರುವ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿಗೆ ದಂಡ ವಿಧಿಸುವ ಮೂಲಕ ಪ್ರಕರಣವನ್ನು ಮುಗಿಸಬಾರದು. ಅವರಿಬ್ಬರನ್ನು ಟೂರ್ನಿಯಿಂದ ಅಮಾನತು ಮಾಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಆರ್ಸಿಬಿ ಹಾಊ ಲಕ್ನೊ ಸೂಪರ್ ಜಯಂಟ್ಸ್ ನಡುವಿನ ಪಂದ್ಯದ ಬಳಿಕ ಗಂಭೀರ್ ಹಾಗೂ ಕೊಹ್ಲಿ ಪರಸ್ಪರ ವಾಗ್ಯುದ್ಧ ನಡೆಸಿದ್ದರು. ಆ ಬಳಿಕ ಐಪಿಎಲ್ ಆಡಳಿತ ಮಂಡಳಿ ಕೊಹ್ಲಿಗೆ 1.07 ಕೋಟಿ ರೂಪಾಯಿ ಹಾಗೂ ಗಂಭೀರ್ಗೆ 25 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಆದರೆ, ಗವಾಸ್ಕರ್ ಪ್ರಕಾರ ದಂಡ ವಿಧಿಸಬಾರದಿತ್ತು. ಅಮಾನತು ಶಿಕ್ಷೆ ವಿಧಿಸಬೇಕಾಗಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು, ಟೂರ್ನಿಯ ವೇಳೆ ಏನಾದರೂ ಒಂದು ಘಟನೆ ಸಂಭವಿಸಿದರೆ ಅದು ಮತ್ತೆ ಮರುಕಳಿಸಬಾರದು. 10 ವರ್ಷದ ಹಿಂದೆ ಹರ್ಭಜನ್ ಸಿಂಗ್ ಶ್ರೀಶಾಂತ್ ಅವರ ಕಪಾಳಕ್ಕೆ ಹೊಡೆದ ಪ್ರಕರಣದಲ್ಲಿ ಅವರಿಬ್ಬರನ್ನು ಎರಡೆರಡು ಪಂದ್ಯಗಳಿಂದ ಹೊರಕ್ಕೆ ಕೂರಿಸಲಾಗಿತ್ತು. ಈ ಮೂಲಕ ಮುಂದೆ ಇಂಥ ಘಟನೆಗಳು ನಡೆಯಲೇಬಾರದು ಎಂಬ ಸೂಚನೆ ಕೊಟ್ಟಿತ್ತು ಐಪಿಎಲ್. ಅದೇ ಮಾದರಿಯ ಶಿಕ್ಕೆಯನ್ನು ಇಲ್ಲೂ ವಿಧಿಸಬೇಕಾಗಿತ್ತು ಎಂದು ಗವಾಸ್ಕರ್ ಹೇಳಿದ್ದಾರೆ.
ಪಂದ್ಯದ ಶುಲ್ಕದಲ್ಲಿ ಶೇಕಡ ಕಡಿತ ಮಾಡುವುದರಿಂದ ಏನು ಪ್ರಯೋಜನ . ಅದು ಕೋಟಿಗಳ ಲೆಕ್ಕದಲ್ಲಿ ಮಾತ್ರ ಸರಿಯಾಗಿದೆ. ಅದೆಷ್ಟು ಎಂಬುದನ್ನು ನಿರ್ಧಾರ ಮಾಡುವುದಕ್ಕೆ ಸಾಧ್ಯವಿಲ್ಲ. ಅದೊಂದು ದೊಡ್ಡ ಮೊತ್ತ ಎಂದು ಅನಿಸದು. ಹೀಗಾಗಿ ಪಂದ್ಯದ ನಿಷೇಧವೇ ಸರಿಯಾದ ದಂಡ ಎಂದು ಹೇಳಿದರು.
ಮುಂದುವರಿದ ಅವರು ಇಂಥದ್ದೆಲ್ಲ ದೊಡ್ಡ ಸಂಗತಿ ಎನಿಸುವುದು ಟಿವಿಗಳಕಾರಣಕ್ಕೆ. ಹೆಚ್ಚು ಜನ ನೋಡಿದ್ದಾರೆ. ಹಾಗೆಯೇ ಅದು ದೊಡ್ಡ ವಿಷಯ ಎನಿಸಿದೆ ಎಂದು ಅವರು ಹೇಳಿದ್ದಾರೆ.
ಏನಾಯಿತು ಈ ಜಗಳ
ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಲೋಕದ ಅತ್ಯಂತ ಆಕ್ರಮಣಕಾರಿ ಆಟಗಾರ. ಈ ಸ್ಟಾರ್ ಆಟಗಾರನ ದೊಡ್ಡ ಟೀಕಾಕಾರ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್. ಹೀಗಾಗಿ ಇವರಿಬ್ಬರದು ಹಾವು- ಮುಂಗುಸಿ ಮುನಿಸು. ಈ ಕೋಪ ಲಖನೌನಲ್ಲಿ ಸೋಮವಾರ ಸ್ಫೋಟಗೊಂಡಿತು. ಇಬ್ಬರೂ ಪರಸ್ಪರ ಗುರಾಯಿಸಿಕೊಂಡರಲ್ಲದೆ, ಮಾತಿನ ಚಕಮಕಿಯೂ ನಡೆಸಿದರು. ಕೊನೆಗೆ ಸುತ್ತ ಮುತ್ತ ಇದ್ದ ಆಟಗಾರರು ಅಂಪೈರ್ಗಳು ಅವರಿಬ್ಬರನ್ನು ಬೇರ್ಪಡಿಸಬೇಕಾಯಿತು. ಇವರಿಬ್ಬರ ಜಗಳ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಯಿತಲ್ಲದೆ ಮೀಮ್ಗಳ ಮಳೆಯೇ ಸುರಿಯಿತು.
ಐಪಿಎಲ್ನ 43ನೇ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ತಂಡ 18 ರನ್ಗಳಿಂದ ಸೋಲಿಸಿತ್ತು. ಪಂದ್ಯದ ಬಳಿಕ ಪರಸ್ಪರ ಅಭಿನಂದಿಸುವ ಸಮಯದಲ್ಲಿ ಗಂಭೀರ್ ಮತ್ತು ಕೊಹ್ಲಿಯ ಕೋಳಿ ಜಗಳ ಆರಂಭಗೊಂಡಿತು. ಬಳಿಕ ಪರಸ್ಪರ ಯುದ್ಧಕ್ಕೆ ನಿಂತ ಹಾಗೆ ಮಾಡಿದರಲ್ಲದೆ ಅಂತಿಮವಾಗಿ ಉಳಿದವರ ಮಧ್ಯಪ್ರವೇಶದಿಂದ ತಣ್ಣಗಾಯಿತು.