Site icon Vistara News

IPL 2023 : ಚೆನ್ನೈ ಸೂಪರ್​ ಕಿಂಗ್ಸ್​ಗೆ ಆನೆ ಬಲ, ದಕ್ಷಿಣ ಆಫ್ರಿಕಾದ ದೈತ್ಯ ಬೌಲರ್​ ಸೇರ್ಪಡೆ

Giant bowler of South Africa team added to Chennai Super Kings

#image_title

ಚೆನ್ನೈ: ಐಪಿಎಲ್​ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಕಾರಣ ಎಲ್ಲ ಫ್ರಾಂಚೈಸಿಗಳು ಅಭ್ಯಾಸ ಆರಂಭಿಸಿವೆ. ಏತನ್ಮಧ್ಯೆ, ಗಾಯಗೊಂಡ ಕಾರಣ ಟೂರ್ನಿಗೆ ಲಭ್ಯರಾಗದ ಆಟಗಾರರಿಗೆ ಬದಲಿಗೆ ಆಟಗಾರರನ್ನು ಹುಡುಕುವ ಕೆಲಸವನ್ನೂ ಮಾಡಲಾಗುತ್ತಿದೆ. ಅಂತೆಯೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೂ ಗಾಯದ ಸಮಸ್ಯೆಗೆ ಬಾಧಿಸಿತ್ತು. ನ್ಯೂಜಿಲ್ಯಾಂಡ್​ನ ವೇಗದ ಬೌಲರ್​ ಕೈಲ್ ಜೇಮಿಸನ್​ ಟೂರ್ನಿಗೆ ಅಲಭ್ಯರಾಗಿದ್ದಾರೆ. ಅವರಿಗೆ ಪರ್ಯಾಯ ಆಟಗಾರರನ್ನು ಹುಡುಕುತ್ತಿದ್ದ ಅವರಿಗೆ ಸಿಕ್ಕಿದ್ದು ದಕ್ಷಿಣ ಆಫ್ರಿಕಾದ ವೇಗದ ಬೌಲರ್​ ಸಿಸಂಡಾ ಮಗಾಲ. ಚುಟುಕ ಮಾದರಿಯ ಕ್ರಿಕೆಟ್​ನಲ್ಲಿ ವಿಕೆಟ್​ ಟೇಕರ್ ಎನಿಕೊಂಡಿರುವ ಸಿಸಂಡಾ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬೌಲಿಂಗ್ ಬಲವನ್ನು ಹೆಚ್ಚಿಸಿಕೊಂಡಿದೆ.

ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್ಸ್​ಗೆ 28 ವರ್ಷದ ಜೇಮಿಸನ್​ ಅವರ ಅಲಭ್ಯತೆಯ ಕೊರಗು ಕಾಡುತ್ತಿತ್ತು. ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗುತ್ತಿದ್ದ ವೇಳೆ ಜೇಮಿಸನ್ ಗಾಯಗೊಂಡಿದ್ದರು. ಬಳಿಕ ಅವರಿಗೆ ಸರ್ಜರಿ ಮಾಡಲಾಗಿದೆ. ಹೀಗಾಗಿ ಸದ್ಯಕ್ಕೆ ಅವರಿಗೆ ಕ್ರಿಕೆಟ್​ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರ್ಯಾಯ ಆಟಗಾರನಿಗಾಗಿ ಹುಡುಕುತ್ತಿದ್ದ ಸಿಎಸ್​ಕಗೆ ಮಗಲಾ ಸಿಕ್ಕಿದ್ದಾರೆ.

ಅಂದ ಹಾಗೆ ಸಿಸಂಡಾ ಮಗಲಾ ದಕ್ಷಿಣ ಆಫ್ರಿಕಾ ತಂಡದ ಪರ ಕೇವಲ ನಾಲ್ಕು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಆದರೆ ವೇಗದ ಬೌಲರ್​ ಆಗಿರುವ ಅವರು ದೇಶಿಯ ಕ್ರಿಕೆಟ್​ನಲ್ಲಿ ಹೆಚ್ಚು ದಾಖಲೆಗಳನ್ನು ಹೊಂದಿದ್ದಾರೆ. ಸತತವಾಗಿ ವಿಕೆಟ್​ಗಳನ್ನು ಉರುಳಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಹೀಗಾಗಿ ಅವರ ಸೇರ್ಪಡೆಯಿಂದ ಚೆನ್ನೈ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಆರ್​ಸಿಬಿ ಸೇರಿದ ವಿಲ್ ಯಂಗ್​

ಈ ಹಿಂದೆ ಆರ್​ಸಿಬಿ ತಂಡಕ್ಕೊಂದು ಆಘಾತ ಎದುರಾಗಿತ್ತು. 3.2 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದ ಇಂಗ್ಲೆಂಡ್​ನ ಸ್ಫೋಟಕ ಬ್ಯಾಟರ್ ವಿಲ್ ಯಂಗ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಆ ಸ್ಥಾನಕ್ಕೊಂದು ಪರ್ಯಾಯ ಆಟಗಾರನನ್ನು ತಂಡ ಹುಡುಕಿದೆ. ಅವರೇ ನ್ಯೂಜಿಲ್ಯಾಂಡ್​ನ ಮೈಕೆಲ್​ ಬ್ರೇಸ್​ವೆಲ್​.

ವಿಲ್​ ಯಂಗ್​ ಇಂಗ್ಲೆಂಡ್​ ತಂಡದ ಬಾಂಗ್ಲಾದೇಶ ಪ್ರವಾಸದ ಭಾಗವಾಗಿದ್ದರು. ಆದರೆ, ಅಲ್ಲಿ ಅವರು ಗಾಯಕ್ಕೆ ಒಳಗಾಗಿದ್ದರು. ಅವರ ಸುಧಾರಣೆಗೆ ದೀರ್ಘ ಅವಧಿ ಬೇಕಾಗುತ್ತದೆ. ಹೀಗಾಗಿ ಐಪಿಎಲ್​ ಪೂರ್ತಿ ಟೂರ್ನಿಗೆ ಲಭ್ಯರಾಗುವುದು ಅನುಮಾನ ಎನಿಸಿತ್ತು. ಇದೀಗ ಅದಕ್ಕೆ ಪರಿಹಾರ ಎಂಬಂತೆ ಬ್ರೇಸ್​ವೆಲ್ ಅವರನ್ನು ಖರೀದಿ ಮಾಡಿದೆ ಆರ್​ಸಿಬಿ. ಅಂದ ಹಾಗೆ ಬ್ರೇಸ್ ವೆಲ್​ ಅವರು ಐಪಿಎಲ್​ ಮಿನಿ ಹರಾಜಿನಲ್ಲಿ ಅನ್​ಸೋಲ್ಡ್ ಆಗಿದ್ದರು. ಯಾವುದೇ ತಂಡ ಅವರನ್ನು ಖರೀದಿ ಮಾಡಿರಲಿಲ್ಲ. ಅವರು ಒಂದು ಕೋಟಿ ರೂಪಾಯಿ ಮೂಲ ಬೆಲೆ ಇಟ್ಟುಕೊಂಡಿದ್ದರು. ಫ್ರಾಂಚೈಸಿಗಳಲ್ಲಿ ದುಡ್ಡು ಖಾಲಿಯಾಗಿದ್ದ ಕಾರಣ ಅವರನ್ನು ಯಾರೂ ತೆಗೆದುಕೊಂಡಿರಲಿಲ್ಲ. ಹೀಗಾಗಿ ಅವರನ್ನು ಆರ್​ಸಿಬಿ ತನ್ನ ತೆಕ್ಕೆಗೆ ಮೂಲ ಬೆಲೆಗೆ ತನ್ನದಾಗಿಸಿಕೊಂಡಿದೆ.

ಅಂದ ಹಾಗೆ ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಏಕದಿನ ಸರಣಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಮೂಲಕ ಅವರು ಗಮನ ಸೆಳೆದಿದ್ದರು. ಹೈದರಾಬಾದ್‌ ಪಂದ್ಯದಲ್ಲಿ ಅವರು ಭರ್ಜರಿ ಶತಕ ಸಿಡಿಸಿದ್ದರು. ಈ ಸರಣಿಯ ಮೂರೂ ಪಂದ್ಯಗಳಿಂದ ಅವರು 144.63ರ ಸ್ಟ್ರೈಕ್‌ ರೇಟ್‌ನಲ್ಲಿ 188 ರನ್‌ ಗಳಿಸಿದ್ದರು. ಆ ಮೂಲಕ ಶುಭಮನ್‌ ಗಿಲ್ ಬಳಿಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ಇದನ್ನೂ ಓದಿ : IPL 2023: ಐಪಿಎಲ್​ಗೆ ಕೋವಿಡ್​ ಮಾರ್ಗಸೂಚಿ ಪ್ರಕಟ; 7 ದಿನ ಕ್ವಾರಂಟೈನ್​ ಕಡ್ಡಾಯ

32ರ ಪ್ರಾಯದ ಮೈಕಲ್‌ ಬ್ರೇಸ್‌ವೆಲ್‌ ಅವರು ನ್ಯೂಜಿಲ್ಯಾಂಡ್​ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿಯೂ ಉತ್ತಮ ದಾಖಲೆ ಹೊಂದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ 117 ಟಿ20 ಪಂದ್ಯಗಳಾಡಿರುವ ಅವರು, 133.48 ಸ್ಟ್ರೈಕ್‌ ರೇಟ್‌ನಲ್ಲಿ 2284 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಹಾಗೂ 13 ಅರ್ಧಶತಕಗಳು ಸೇರಿಕೊಂಡಿವೆ. ಇದರ ಜೊತೆಗೆ 20 ಅಂತಾರಾಷ್ಟ್ರೀಯ ವಿಕೆಟ್‌ಗಳು ಸೇರಿದಂತೆ ಒಟ್ಟು 40 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮೈಕೆಲ್​ ಬ್ರೇಸ್​ವೆಲ್​ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದರು. ಐಪಿಎಲ್​ನಲ್ಲಿ ಅವಕಾಶ ಪಡೆದುಕೊಂಡಿರುವ ಕಾರಣ ಅವರರನ್ನು ತಂಡದಿಂದ ಕೈ ಬಿಡಲಾಗಿದೆ. ರಚಿನ್​ ರವೀಂದ್ರಗೆ ಅವಕಾಶ ಕೊಡಲಾಗಿದೆ. ಐಪಿಎಲ್​ಗಾಗಿ ಅವರೆಲ್ಲರೂ ಭಾರತಕ್ಕೆ ಬರುವ ಕಾರಣ ಕೇನ್​ ವಿಲಿಯಮ್ಸನ್​, ಟಿಮ್​ ಸೌಥಿ, ಡೆವೋನ್​ ಕಾನ್ವೆ ಹಾಗೂ ಮಿಚೆಲ್ ಸ್ಯಾಂಟ್ನರ್​ ಕೂಡ ನ್ಯೂಜಿಲ್ಯಾಂಡ್​ ಏಕ ದಿನ ತಂಡದಲ್ಲಿ ಆಡುತ್ತಿಲ್ಲ.

Exit mobile version