Site icon Vistara News

INDvsSL ODI | ಗಿಲ್​, ಕೊಹ್ಲಿ ಶತಕದ ಅಬ್ಬರ; ಲಂಕಾ ವಿರುದ್ಧ 390 ರನ್​ಗಳ ಶಿಖರ ನಿರ್ಮಿಸಿದ ಭಾರತ ತಂಡ

Virat kohli

ತಿರುವನಂತಪುರ : ವಿರಾಟ್​ ಕೊಹ್ಲಿ (166* ರನ್​, 110 ಎಸೆತ, 13 ಪೋರ್​, 8 ಸಿಕ್ಸರ್​), ಶುಭಮನ್​ ಗಿಲ್​ (116 ರನ್​, 97 ಎಸೆತ, 14 ಫೋರ್​, 2 ಸಿಕ್ಸರ್​) ಜೋಡಿಯ ಅಮೋಘ ಶತಕಗಳ ನೆರವು ಪಡೆದ ಭಾರತ ತಂಡ ಶ್ರೀಲಂಕಾ ವಿರುದ್ಧದ ಏಕ ದಿನ ಸರಣಿಯ (INDvsSL ODI) ಮೂರನೇ ಪಂದ್ಯದಲ್ಲಿ 390 ರನ್​ಗಳ ಬೃಹತ್ ಮೊತ್ತ ಪೇರಿಸಿದೆ. ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿಜಯ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿರುವ ಭಾರತ ತಂಡದ ಆಟಗಾರರು ನಿರಾಳವಾಗಿ ಆಡಿ ಎದುರಾಳಿ ತಂಡಕ್ಕೆ 391 ರನ್​ಗಳ ಗೆಲುವಿನ ಗುರಿಯನ್ನೊಡ್ಡಿದರು.

ತಿರುವನಂತಪುರದ ಗ್ರೀನ್​ ಫೀಲ್ಡ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದು ಟೀಮ್​ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡು ಆಡಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್​ಗೆ 390 ಬಾರಿಸಿತು.

ಆರಂಭಿಕರಾಗಿ ಬ್ಯಾಟ್​ ಮಾಡಿದ ರೋಹಿತ್​ ಶರ್ಮ (42) ಹಾಗೂ ಶುಬ್ಮನ್​ ಗಿಲ್​ ಜೋಡಿ ಮೊದಲ ವಿಕೆಟ್​ಗೆ 95 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ, 2 ಪೋರ್​ ಹಾಗೂ ಮೂರು ಮನಮೋಹಕ ಸಿಕ್ಸರ್​ ಬಾರಿಸಿ ಪ್ರೇಕ್ಷಕರಿಗೆ ರಂಜನೆ ನೀಡಿದ್ದ ನಾಯಕ ರೋಹಿತ್​ ಶರ್ಮ ಅರ್ಧ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರು.

ಬಳಿಕ ಜತೆಯಾದ ಶುಭ್​ಮನ್​ ಮತ್ತು ಕೊಹ್ಲಿ ಜೋಡಿ ಲಂಕಾ ಬೌಲರ್​ಗಳನ್ನು ನಿರಂತರವಾಗಿ ದಂಡಿಸಿದರು. ಅವರಿಬ್ಬರೂ 131 ರನ್​ಗಳ ಜತೆಯಾಟ ನೀಡಿದರು. 89 ಎಸೆತಗಳಲ್ಲಿ ಎರಡನೇ ಏಕ ದಿನ ಶತಕ ಬಾರಿಸಿದ ಗಿಲ್​ 97 ಎಸೆತಗಳಲ್ಲಿ 116 ರನ್​ ಬಾರಿಸಿ ಔಟಾದರು. ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕೊಹ್ಲಿ 85 ಎಸೆತಗಳಲ್ಲಿ ಶತಕ ಬಾರಿಸಿದರು. ಇದು ಅವರ 74 ನೇ ಅಂತಾರಾಷ್ಟ್ರೀಯ ಶತಕ ಹಾಗೂ 46ನೇ ಏಕ ದಿನ ಶತಕವಾಗಿದೆ.

ಈ ಸರಣಿಯ ಮೊದಲ ಪಂದ್ಯದಲ್ಲೂ ವಿರಾಟ್​ ಶತಕ ಬಾರಿಸಿದ್ದರು. ಅಲ್ಲದೆ ವರ್ಷಾರಂಭದಲ್ಲೇ ಎರಡು ಶತಕಗಳನ್ನು ಬಾರಿಸಿದ್ದಾರೆ. ಮುಂದುವರಿದ ಅವರು 110 ಎಸೆತಗಳಲ್ಲಿ 166 ರನ್​ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಮೊದಲ ನೂರು ರನ್​ ಬಾರಿಸಲು 85 ಎಸೆತ ತೆಗೆದುಕೊಂಡ ಕೊಹ್ಲಿ, ನಂತರದ 25 ಎಸೆತಗಳಲ್ಲಿ 66 ರನ್​ ಬಾರಿಸಿದರು. ಶ್ರೇಯಸ್​ ಅಯ್ಯರ್​ (38) ರನ್​ಗಳ ಕೊಡುಗೆ ಕೊಟ್ಟರೆ, ಕೆ. ಎಲ್​ ರಾಹುಲ್​ (7) ಹಾಗೂ ಸೂರ್ಯಕುಮಾರ್​ ಯಾದವ್​ (4) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಲಂಕಾ ತಂಡದ ಪರ ಕಸುನ್​ ರಜಿತ ಹಾಗೂ ಲಾಹಿರು ಕುಮಾರ ತಲಾ ಎರಡು ವಿಕೆಟ್​ ಕಬಳಿಸಿದರು.

ಇದನ್ನೂ ಓದಿ | VIrat Kohli | 74ನೇ ಶತಕ ಬಾರಿಸಿದ ರನ್​ ಮಷಿನ್​ ವಿರಾಟ್​ ಕೊಹ್ಲಿ; ಭಾರತ ತಂಡ ಸುಸ್ಥಿತಿಯಲ್ಲಿ

Exit mobile version