ಚಿತ್ತಗಾಂಗ್ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೂರನೇ ದಿನ ಭಾರತ ತಂಡ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಮೊದಲ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡವನ್ನು 150 ರನ್ಗಳಿಗೆ ಆಲ್ಔಟ್ ಮಾಡಿ 254 ರನ್ಗಳ ಮುನ್ನಡೆ ಪಡೆಯಿತು. ಬಳಿಕ ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಕೆ. ಎಲ್ ರಾಹುಲ್ ಪಡೆ, 2 ವಿಕೆಟ್ ನಷ್ಟಕ್ಕೆ 250 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. 513 ರನ್ಗಳ ಗೆಲುವಿನ ಗುರಿಯನ್ನು ಪಡೆದ ಆತಿಥೇಯ ಪಡೆ ದಿನದಾಟದ ಅಂತ್ಯಕ್ಕೆ 12 ಓವರ್ಗಳಲ್ಲಿ 42 ರನ್ ಬಾರಿಸಿದ್ದು, ಇನ್ನೂ 471 ರನ್ಗಳ ಹಿನ್ನಡೆಯಲ್ಲಿದೆ.
ಎರಡನೇ ದಿನದಾಟದ ಅಂತ್ಯಕ್ಕೆ 44 ಓವರ್ಗಳಲ್ಲಿ 133 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ, ಮೂರನೇ ದಿನದ ಮೊದಲ ಅವಧಿಯಲ್ಲಿ ಹೆಚ್ಚು ಹೊತ್ತು ಆಟ ಮುಂದುವರಿಸಲಿಲ್ಲ. 54.3 ಓವರ್ಗಳಲ್ಲಿ 150 ರನ್ಗಳಿಗೆ ಆಲ್ಔಟ್ ಆಯಿತು. ಕುಲ್ದೀಪ್ ಯಾದವ್ ಮತ್ತೊಂದು ವಿಕೆಟ್ ಪಡೆಯುವ ಮೂಲಕ 5 ವಿಕೆಟ್ ಸಾಧನೆ ಮಾಡಿದರು.
ಎರಡನೇ ಇನಿಂಗ್ಸ್ ಬ್ಯಾಟ್ ಮಾಡಿದ ಭಾರತ ತಂಡ ಮೊದಲ ವಿಕೆಟ್ಗೆ 70 ರನ್ ಬಾರಿಸಿ ಉತ್ತಮ ಆರಂಭ ಪಡೆಯಿತು. ಆದರೆ, ಕೆ. ಎಲ್ ರಾಹುಲ್ 23 ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ, ಶುಬ್ಮನ್ ಗಿಲ್ (110) ಶತಕ ಬಾರಿಸಿ ಸಾಧನೆ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಚೇತೇಶ್ವರ್ ಪೂಜಾರ (102) ಅಜೇಯ ಶತಕ ಬಾರಿಸಿದರು. ವಿರಾಟ್ ಕೊಹ್ಲಿ 19 ರನ್ ಬಾರಿಸಿದರು. ಪೂಜಾರ ಶತಕ ಬಾರಿಸುತ್ತಿದ್ದಂತೆ ಭಾರತ ತಂಡ ಡಿಕ್ಲೇರ್ ಘೋಷಿಸಿತು.
513 ರನ್ಗಳ ಗುರಿಯೊಂದಿಗೆ ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 12 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 42 ರನ್ ಬಾರಿಸಿತು. ನಜ್ಮುಲ್ ಹೊಸೈನ್ 25 ರನ್, ಜಾಕಿರ್ ಹಸನ್ 17 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನೂ ಎರಡು ದಿನಗಳ ಪಂದ್ಯ ಬಾಕಿ ಉಳಿದಿದ್ದು ಬಾಂಗ್ಲಾದೇಶದ ವಿಕೆಟ್ ಉರುಳಿಸುವುದೇ ಭಾರತ ಬಳಗದ ಗುರಿಯಾಗಿದೆ.
ಇದನ್ನೂ ಓದಿ | INDvsBAN | 258 ರನ್ಗಳಿಗೆ ಡಿಕ್ಲೇರ್ ಮಾಡಿದ ಭಾರತ; ಬಾಂಗ್ಲಾಗೆ 513 ರನ್ ಗೆಲುವಿನ ಗುರಿ