ನವದೆಹಲಿ: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಅವರು ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಮಾರ್ಕ್ರಮ್ ದಾಖಲೆ ಪತನ
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆಯನ್ನು ಸುರಿಸಿದ ಗ್ಲೆನ್ ಮ್ಯಾಕ್ಸ್ವೆಲ್ ಅವರು ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಈ ಮೂಲಕ ವಿಶ್ವಕಪ್ ಕ್ರಿಕೆಟ್ನಲ್ಲಿ ಅತಿ ಕಡಿಮೆ ಎಸೆತಗಳಿಂದ(Fastest 100s in World Cups) ಶತಕ ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಆಟಗಾರ ಐಡೆನ್ ಮಾರ್ಕ್ರಮ್ ಅವರು 49 ಎಸೆತಗಳಿಂದ ಶತಕ ಬಾರಿಸಿ ದಾಖಲೆ ಬರೆದಿದ್ದರು. ಆದರೆ ಈಗ ಮ್ಯಾಕ್ಸ್ವೆಲ್ ಅವರು ಈ ದಾಖಲೆಯನ್ನು ಮುರಿದಿದ್ದಾರೆ. ಅಚ್ಚರಿ ಎಂದರೆ ಮಾರ್ಕ್ರಮ್ ಕೂಡ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ದಾಖಲೆ ಬರೆದಿದ್ದರು. ಮ್ಯಾಕ್ಸ್ವೆಲ್ ಕೂಡ ಇದೇ ಸ್ಟೇಡಿಯಂನಲ್ಲಿ ದಾಖಲೆ ಬರೆದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ದಾಖಲೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್ ಹೆಸರಿನಲ್ಲಿದೆ ಅವರು 2015ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿದ್ದರು. 36 ಎಸೆತಗಳಿಂದ ಶತಕ ಬಾರಿಸಿದ ನ್ಯೂಜಿಲ್ಯಾಂಡ್ನ ಕೋರಿ ಆ್ಯಂಡರ್ಸನ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಈ ಹಿಂದೆ 51 ಎಸೆತದಲ್ಲಿ ಶತಕ
ಈ ಹಿಂದೆ ಮ್ಯಾಕ್ಸ್ವೆಲ್ ಅವರು 2015ರ ವಿಶ್ವಕಪ್ನಲ್ಲಿ 51 ಎಸೆತಗಳಿಂದ ಶತಕ ಬಾರಿಸಿದ್ದರು. ಇದೀಗ 11 ಎಸೆತಗಳ ಕಡಿಮೆ ಅಂತರದಲ್ಲಿ ಮತ್ತೊಂದು ಶತಕ ಬಾರಿಸಿ ತಮ್ಮ ಹಿಂದಿನ ದಾಖಲೆಯನ್ನು ಉತ್ತಮ ಪಡಿಸುವ ಜತೆಗೆ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಇದನ್ನೂ ಓದಿ David Warner: ಶತಕ ಬಾರಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಬಂದ ಮ್ಯಾಕ್ಸ್ವೆಲ್ ಅವರು ಒಟ್ಟು 44 ಎಸೆತ ಎದುರಿಸಿ 106 ರನ್ಬಾರಿಸಿ ಔಟಾದರು. ಅವರ ಈ ಸೊಗಸಾದ ಬ್ಯಾಟಿಂಗ್ ವೇಳೆ ಬರೋಬ್ಬರಿ 8 ಸಿಕ್ಸರ್ ಮತ್ತು 9 ಬೌಂಡರಿ ಸಿಡಿಯಿತು. ಇವರಿಗಿಂತ ಮೊದಲು ಆರಂಭಿಕನಾಗಿ ಕಣಕ್ಕಿಳಿದ್ದ ಡೇವಿಡ್ ವಾರ್ನರ್ ಕೂಡ ಶತಕ ಬಾರಿಸಿದ್ದರು. ಉಭಯ ಆಟಗಾರರ ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತವನ್ನು ಪೇರಿಸಿದೆ.
The Big Show by Maxi 🔥
— ɅMɅN DUВΞY 🇮🇳 (@imAmanDubey) October 25, 2023
Fastest World Cup Century by Glenn Maxwell in just 40 balls. #AUSvsNEDpic.twitter.com/12rQUsgD0B
ಕೆವಿನ್ ಒಬ್ರಿಯನ್ಗೆ ಮೂರನೇ ಸ್ಥಾನ
ವಿಶ್ವಕಪ್ನಲ್ಲಿ ಅತಿ ಕಡಿಮೆ ಎಸೆತದಿಂದ ಶತಕ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಐರ್ಲೆಂಡ್ ತಂಡದ ಕೆವಿನ್ ಒಬ್ರಿಯನ್ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಅವರು 2011ರಲ್ಲಿ ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ (52 ಎಸೆತಗಳು) ಹಾಗೂ ಇಂಗ್ಲೆಂಡ್‌ನ ಐಯಾನ್ ಮಾರ್ಗನ್ (57 ಎಸೆತಗಳು) ಅವರು ಈ ಸಾಧಕರ ಪಟ್ಟಿಯಲ್ಲಿ ಕ್ರಮವಾಗಿ 4 ಹಾಗೂ 5ನೇ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಸಚಿನ್ ದಾಖಲೆ ಸರಿಗಟ್ಟಿದ ವಾರ್ನರ್
ಡೇವಿಡ್ ವಾರ್ನರ್ ಅವರು ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿಶ್ವಕಪ್ನಲ್ಲಿ ಟೂರ್ನಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದರು.
ಸಚಿನ್ ಮತ್ತು ವಾರ್ನರ್ ವಿಶ್ವಕಪ್ನಲ್ಲಿ ತಲಾ 6 ಶತಕ ಬಾರಿಸಿದ್ದಾರೆ. 7 ಶತಕ ಬಾರಿಸಿರುವ ರೋಹಿತ್ ಶರ್ಮ ಅವರು ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಅವರು ಈ ದಾಖಲೆಯನ್ನು ಹಾಲಿ ಆವೃತ್ತಿಯಲ್ಲಿ ನಿರ್ಮಿಸಿದ್ದರು. ಇದೀಗ ವಾರ್ನರ್ ಕೂಡ ಇದೇ ಆವೃತ್ತಿಯಲ್ಲಿ 2 ಆತಕ ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದು ವಾರ್ನರ್ ಅವರ ಏಕದಿನ ಕ್ರಿಕೆಟ್ನ 22ನೇ ಶತಕವಾಗಿದೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಲಂಕಾದ ಕುಮಾರ ಸಂಗಕ್ಕರ ಅವರು ವಿಶ್ವಕಪ್ನಲ್ಲಿ ತಲಾ 5 ಶತಕ ಬಾರಿಸಿದ್ದಾರೆ.
ವಾರ್ನರ್ ಅವರು ಈ 93 ಎಸೆತ ಎದುರಿಸಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 104 ರನ್ಗೆ ವಿಕೆಟ್ ಕೈಚೆಲ್ಲಿದರು. ಕಳೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ವಾರ್ನರ್ ಶತಕ ಬಾರಿಸಿ ಸಂಭ್ರಮಿಸಿದ್ದರು. ಈ ಶತಕದ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದಂತಾಗಿದೆ.