Site icon Vistara News

D Gukesh: ಚೆಸ್​ ದಂತಕತೆ ವಿಶ್ವನಾಥನ್ ಆನಂದ್ ಮೀರಿಸಿದ 17ರ ಪೋರ; ಏನಿದು ದಾಖಲೆ?

GM Gukesh

ಬೆಂಗಳೂರು: ಭಾರತದ 17 ವರ್ಷದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ಡಿ(D Gukesh) ಅವರು ವಿಶ್ವ ಶ್ರೇಯಾಂಕದಲ್ಲಿ ಭಾರತದ ನಂಬರ್ ಒನ್ ಚೆಸ್ ಆಟಗಾರನಾಗಿ ಮೂಡಿಬಂದಿದ್ದಾರೆ. ಈ ಮೂಲಕ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್(GM Viswanathan Anand) ಅವರ 37 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.

ಗುರುವಾರ ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಫಿಡೆ ವಿಶ್ವಕಪ್‌ನ ಎರಡನೇ ಸುತ್ತಿನಲ್ಲಿ ಮಿಸ್ಟ್ರಾಡಿನ್ ಇಸ್ಕಂದರೋವ್ ಅವರನ್ನು ಸೋಲಿಸಿದ ಗುಕೇಶ್, ಕ್ಲಾಸಿಕ್ ಓಪನ್ ವಿಭಾಗದಲ್ಲಿ 2755.9 ಲೈವ್ ರೇಟಿಂಗ್ ಪಡೆದು ವಿಶ್ವದ 9 ನೇ ಸ್ಥಾನಕ್ಕೇರಿದರು. 2754.0 ಅಂಕ ಪಡೆದಿರುವ ಆನಂದ್ ಹತ್ತನೇ ಸ್ಥಾನಕ್ಕೆ ಕುಸಿದಿದ್ದಾರೆ. ಆನಂದ್ ಅವರು 1986 ಬಳಿಕ ಎರಡು ಬಾರಿ ನೇರ ವಿಶ್ವ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಕುಸಿದರು.

“ಗುಕೇಶ್ ಡಿ ಇಂದು ಮತ್ತೊಮ್ಮೆ ಗೆದ್ದಿದ್ದಾರೆ ಮತ್ತು ಲೈವ್ ರೇಟಿಂಗ್‌ನಲ್ಲಿ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ! ಸೆಪ್ಟೆಂಬರ್ 1 ರಂದು ಮುಂದಿನ ಅಧಿಕೃತ FIDE ರೇಟಿಂಗ್ ಪಟ್ಟಿಗೆ ಇನ್ನೂ ಸುಮಾರು ಒಂದು ತಿಂಗಳು ಇದೆ, ಆದರೆ 17 ವಯಸ್ಸಿನ ಈ ಆಟಗಾರ ಅಗ್ರ 10 ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು. ವಿಶ್ವದ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಆಟಗಾರನಿಗೆ ಧನ್ಯವಾದಗಳು” ಎಂದು ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ (ಐಸಿಎಫ್) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದೆ.

ವಿಶ್ವನಾಥನ್​ ಆನಂದ್​ ಕೂಡ ಗುಕೇಶ್ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಚೆಸ್​ ಇನ್ನೂ ಕೂಡ ಜೀವಂತವಾಗಿದೆ ಎನ್ನುವುದಕ್ಕೆ ಇದುವೇ ಉತ್ತಮ ಸಾಕ್ಷಿ ಎಂದು ಹೇಳುವ ಮೂಲಕ ಗುಕೇಶ್ ಸಾಧನೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ World Rapid Chess | ಫಿಡೆ ಮಹಿಳೆಯರ ವಿಶ್ವ ರ‍್ಯಾಪಿಡ್‌ ಚೆಸ್‌ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಸವಿತಾ ಶ್ರೀ

ಮ್ಯಾಗ್ನಸ್ ಕಾರ್ಲ್‌ಸನ್​ಗೂ ನೀರು ಕುಡಿಸಿದ್ದ ಗುಕೇಶ್

ಕಳೆದ ವರ್ಷವಷ್ಟೇ ವಿಶ್ವದ ನಂಬರ್ ಒನ್ ಚೆಸ್ ಪ್ಲೇಯರ್ ಮ್ಯಾಗ್ನಸ್ ಕಾರ್ಲ್‌ಸನ್‌ ಅವರನ್ನು ಗುಕೇಶ್ ಸೋಲಿಸಿ ಭಾರಿ ಸುದ್ದಿಯಾಗಿದ್ದರು. ಆನ್‌ಲೈನ್ ಚೆಸ್ ಸ್ಪರ್ಧೆಯಲ್ಲಿ ಕಾರ್ಲ್‌ಸೆನ್ ಅವರನ್ನು ಸೋಲಿಸಿ ವಿಶ್ವದ ಅತ್ಯಂತ ಕಿರಿಯ ಚೆಸ್ ಆಟಗಾರನಾಗಿ, ವಿಶ್ವ ಚಾಂಪಿಯನ್ ಅವರನ್ನು ಮಣಿಸಿದ ಆಟಗಾರ ಎನಿಸಿಕೊಂಡಿದ್ದರು. ಸ್ಪರ್ಧೆಯ ಒಂಬತ್ತನೇ ಸುತ್ತಿನಲ್ಲಿ, ಮ್ಯಾಗ್ನಸ್ ಕಾರ್ಲ್‌ಸನ್‌ ಅವರಿಗೆ ಊಹಿಸಲು ಅಸಾಧ್ಯವೆಂಬಂತೆ ಭಾರತದ ಈ ಸಣ್ಣ ಪೋರ ಅಂದು ನೀರು ಕುಡಿಸಿದ್ದರು.

Exit mobile version